

ಮಾಯಕೊಂಡ: ಆದರ್ಶ ತತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ನೀಡಿರುವ ಸರ್ವ ಶ್ರೇಷ್ಠ ಮೇಧಾವಿಗಳ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸದೇ ಸಾಮಾಜಿಕವಾಗಿ ಸರ್ವರೂ ಸೇರಿ ಆಚರಣೆ ಮಾಡಿದಲ್ಲಿ ಮಾತ್ರ ಅರ್ಥಪೂರ್ಣವಾಗಿರುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಭಿಮತ ವ್ಯಕ್ತಪಡಿಸಿದರು.
ಹೋಬಳಿಯ ಕಂದಗಲ್ಲು ಗ್ರಾಮದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ರಾಮ್ ಅವರ ಜಯಂತ್ಯುತ್ಸವ ಮತ್ತು ದಲಿತ ಸಂಘರ್ಷ ಸಮಿತಿಯ ಕಂದಗಲ್ಲು ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಮತ್ತು ಬಾಬೂಜಿ ಅವರ ಆಶಯದಂತೆ ಗ್ರಾಮೀಣ ಪ್ರದೇಶದಲ್ಲಿರುವ ರೈತರು, ಕೂಲಿ ಕಾರ್ವಿುಕರು, ಬಡವರು, ಶೋಷಿತರು ಸೇರಿದಂತೆ ಕೆಳವರ್ಗದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುವ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಬೇಕು. ಜತೆಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ಸಿಎಂ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದು, ಸದ್ಯದಲ್ಲೇ ಮೀಸಲಾತಿ ನೋಂದಣಿ ಕಾರ್ಯ ಆರಂಭಗೊಳ್ಳಲಿದೆ. ಆದ್ದರಿಂದ ಪ್ರತಿಯೊಬ್ಬರೂ ಉಪಜಾತಿಯಲ್ಲಿ ಆದಿ ಕರ್ನಾಟಕ ಎನ್ನುವುದನ್ನು ಮಾದಿಗ ಎಂದು, ಆದಿ ದ್ರಾವಿಡ ಎನ್ನುವುದನ್ನು ಛಲವಾದಿ ಎಂದು ಬರೆಸಲು ಮುಂದಾಗಬೇಕು ಎಂದು ತಿಳಿಸಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಮಾತನಾಡಿದರು. ಮುಖಂಡರಾದ ನಿವೃತ್ತ ಎಡಿಎ ಎಸ್.ಪಿ. ರವಿ ನಾರಾಯಣ್ ಸೇರಿ ಇತರರರಿದ್ದರು.