ಸಿಂದಗಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ

MLA Basana Gowda Patil Yatna, Sanatana Dharma, Creation of God, Sindagi, Ganesha Visarjana March,
ಸಿಂದಗಿ ಪಟ್ಟಣದ ಶಾಂತೇಶ್ವರ ಚೌಕಿನ ಸನಾತನ ಧರ್ಮ ವೇದಿಕೆಯ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ದತ್ತಪ್ಪಯ್ಯ ಸ್ವಾಮಿಗಳು, ಈರಣ್ಣ ರಾವೂರ, ಕಿರಣ ಶಿವಶಿಂಪಿಗೇರ ಇತರರಿದ್ದರು.
Published on

ಸಿಂದಗಿ: ಇದು ನಮ್ಮ ಮನೆ, ಸನಾತನ ಧರ್ಮದ ಮನೆ ಭಾರತ. ಸನಾತನ ಧರ್ಮ ಯಾರೋ ಒಬ್ಬರಿಂದ ಸ್ಥಾಪಿತವಾಗಿಲ್ಲ. ಅದು ಭಗವಂತನ ಸೃಷ್ಟಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಶಾಂತೇಶ್ವರ ಚೌಕ್‌ನ ಸನಾತನ ಹಿಂದು ಧರ್ಮ ವೇದಿಕೆಯ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ಶುಕ್ರವಾರ ನೀಡಿದ ನಂತರ ಸ್ವಾಮಿ ವಿವೇಕಾನಂದ ವೃತ್ತದವರೆಗೂ ಮೆರವಣಿಗೆಯಲ್ಲಿ ಸಾಗಿ, ಗಣೇಶ ವಿಸರ್ಜನೋತ್ಸವದಲ್ಲಿ ಅವರು ಮಾತನಾಡಿದರು.

ಭಾರತದ ಸನಾತನ ಧರ್ಮದಲ್ಲಿ ಪಂಚಭೂತಗಳ ಜತೆಗೆ ಪರಿಸರಕ್ಕೂ ಪೂಜೆ ಮಾಡುತ್ತೇವೆ. ಸನಾತನ ಧರ್ಮವನ್ನು ಟೀಕಿಸುವವರನ್ನು ಹೈಬ್ರಿಡ್ ತಳಿಗಳು ಎಂದು ಜರಿದ ಯತ್ನಾಳ, ಮೊಗಲರು, ಬ್ರಿಟಿಷರು, ಸ್ವಾತಂತ್ರೃ ಕೊಡಿಸಲು ಬಂದ ಪಕ್ಷ (ಕಾಂಗ್ರೆಸ್) ದವರೂ ಬಂದು ಅಳಿಸಲು ನಿಂತರೂ ಸನಾತನ ಧರ್ಮ ನಾಶವಾಗಲಿಲ್ಲ ಎಂದರು.

ದಲಿತ ಬಂಧುಗಳೇ, ಮುಸ್ಲಿಂ-ದಲಿತ ಭಾಯಿ..ಭಾಯಿ ಎನ್ನುತ್ತಾರೆ. ಅವರನ್ನು ನಂಬದಿರಿ. ಸನಾತನ ಧರ್ಮ ಉಳಿದರೆ ಮಾತ್ರ ಭಾರತ ಹಾಗೂ ಸಂವಿಧಾನ ಉಳಿಯುತ್ತದೆ. ಇಲ್ಲಿರುವ ಮುಸ್ಲಿಮರಿಗೆ ಪಾಕಿಸ್ತಾನ ಬೇಕಿದೆ. ಪಾಕಿಸ್ತಾನಿಗಳು ಪ್ರಧಾನಿ ಮೋದಿಯನ್ನು ಬಯಸಿದರೆ, ಇಲ್ಲಿನವರು ಇಮ್ರಾನ್‌ಖಾನ್‌ನನ್ನು ಬಯಸುತ್ತಾರೆ ಎಂದು ಲೇವಡಿ ಮಾಡಿದರು. ಆದರೆ ಅಲ್ಲಿನ ಪ್ರಧಾನಿಗಳು ದೇಶ ಲೂಟಿ ಮಾಡಿ ವಿದೇಶಕ್ಕೆ ಪಲಾಯನಗೈದಿದ್ದಾರೆ. ನಮ್ಮ ಭಾರತದ ಯಾವುದೇ ಪಕ್ಷದ ಪ್ರಧಾನಿಯೂ ದೇಶವನ್ನು ಲೂಟಿ ಮಾಡಿ ಓಡಿ ಹೋದವರಲ್ಲ. ಭಾರತ ಎಲ್ಲದರಲ್ಲೂ ಮುಂದೆ ಹೋಗುತ್ತಿದೆ. ತಂತ್ರಜ್ಞಾನದ ವೇಗಕ್ಕೂ ಸಾಕ್ಷಿಯಾಗಿರುವ ಚಂದ್ರಯಾನ ನಂತರ ಇದೀಗ ಸೂರ್ಯನತ್ತ ಸಾಗುತ್ತಿರುವುದು ಸಾಕ್ಷಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಸಿಂದಗಿಯಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ಆದರೆ ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ, ನೀವು ಯಾವ ಬೀದಿಗಾದರೂ ಹೋಗಿಯೂ ಮೆರವಣಿಗೆ ಮಾಡಬಹುದು. ನಮ್ಮ ಭಾರತದಲ್ಲಿ ನಮ್ಮ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಲು, ಕಾನೂನು ಪಾಲಿಸಬೇಕು. ಅನೇಕ ಪರವಾನಗಿಗಳನ್ನು ತೆಗೆದುಕೊಳ್ಳಬೇಕು. ಆದರೆ ನನ್ನ ಕ್ಷೇತ್ರ ವಿಜಯಪುರದಲ್ಲಿ ಇದರ ಗೊಡವೆಯೇ ಇರಲಿಲ್ಲ. ಮುಂದಿನ ಗಣೇಶೋತ್ಸವಕ್ಕೂ ಮುನ್ನವೇ ರಾಜ್ಯಾದ್ಯಂತ ಸಂಚರಿಸಿ, ಸ್ಥಳೀಯ ಆಡಳಿತದ ಪರವಾನಗಿ ಮುಕ್ತ ಗಜಾನನೋತ್ಸವ ನಡೆಸಲು ಅಣಿಯಾಗುವುದಾಗಿ ಭರವಸೆ ನೀಡಿದರು.

ತೆರೆದ ಜೀಪಿನಲ್ಲಿ ಶಾಸಕ ಯತ್ನಾಳ ಜತೆಗೆ ಭೀಮಾಶಂಕರ ಮಠದ ಪೂಜ್ಯ ದತ್ತಪ್ಪಯ್ಯ ಸ್ವಾಮಿಗಳು, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಸೇರಿದಂತೆ ಶಾಂತೇಶ್ವರ ಚೌಕಿನ ಅಧ್ಯಕ್ಷ ಕಿರಣ ಶಿವಶಿಂಪಿಗೇರ ಮೆರವಣಿಗೆಯಲ್ಲಿ ಸಾಥ್ ನೀಡಿದರು.

ಮೆರವಣಿಗೆಗೂ ಮುನ್ನ ಸಾವಿರಾರು ಯುವಕರು ಯತ್ನಾಳ ಕಾಣಲು ಬಂದು ಅವರಿಗೆ ಜೈಕಾರ ಹಾಕಿದರು. ಕೇಸರಿ ಗುಲಾಲು ಸಿಡಿಸಿ, ಬನಾಯೇಂಗೇ ಮಂದಿರ ಹಾಡಿಗೆ ಕುಣಿದು ಕುಪ್ಪಳಿಸಿದರು. ಯತ್ನಾಳ ಮಾತಿನುದ್ದಕ್ಕೂ ಕೇಕೆ, ಸಿಳ್ಳೆಗಳ ಮೊರೆತ ಕೇಳಿಬಂದಿತು. ನಂತರ ಮೆರವಣಿಗೆ ನೀಲಗಂಗಾದೇವಿ ಚೌಕ್, ಹಳೇಯ ಬಜಾರ್ ಮುಖಾಂತರ ಸಂಚರಿಸಿ ವಿಸರ್ಜನೆಗೆ ತೆರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net