

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೇರಿರುವ ಸರ್ಕಾರ ರೈತರು, ಬಡವರ ಬದುಕಿನ ಮೇಲೆ ಬರೆ ಎಳೆದಿದೆ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಏರಿಕೆ ಮಾಡಿಲ್ಲ. ಇದೀಗ ಗ್ಯಾರಂಟಿ ಯೋಜನೆಗಳಿಗಾಗಿ ಕುಡಿಯುವ ನೀರು, ಹಾಲು, ಮದ್ಯ ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದೆ. ತಿಂಗಳಿಗೆ ಎರಡು ಸಾವಿರ ರೂ. ಕೊಟ್ಟಂತೆ ಮಾಡಿ ಮತ್ತೊಂದೆಡೆ ನಾಲ್ಕು ಪಟ್ಟು ವಸೂಲಿ ಮಾಡುತ್ತಿದೆ ಎಂದರು.
ಈ ಮೊದಲು ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು, ತುರ್ತು ಕಾಮಗಾರಿಗಳಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಲಕ್ಷ ರೂ. ನೀಡುತ್ತಿದ್ದವು. ಆದರೆ, ಈಗೀನ ಸರ್ಕಾರ ಕುಡಿಯುವ ನೀರಿಗೆ ಹಣ ನೀಡಲಿಲ್ಲ. ಇಂತಹ ಸರ್ಕಾರದಿಂದ ನಿರೀಕ್ಷೆ ಇಟ್ಟುಕೊಳ್ಳದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ಸರ್ಕಾರದ ಪ್ರತಿಯೊಂದು ವೈಫಲ್ಯ ಜನರ ಮುಂದಿಡುವ ಕೆಲಸವನ್ನು ಬಿಜೆಪಿ ಮಾಡಲಿದೆ. ನಾವೆಲ್ಲ ನಾಯಕರು ಒಂದಾಗಿದ್ದು, ಒಗ್ಗಟ್ಟಿನಿಂದಲೇ ಹೋರಾಟ ನಡೆಸುತ್ತೇವೆ. ಪಕ್ಷದಲ್ಲಿ ಕೆಲ ಸಣ್ಣಪುಟ್ಟ ವಿಷಯಗಳಿರುವುದು ಸಾಮಾನ್ಯ. ಅವುಗಳನ್ನು ನಮ್ಮ ನಾಯಕರು ಪರಿಹರಿಸುತ್ತಾರೆ ಎಂದರು.
ಕುಸಿದ ಆಡಳಿತ ಯಂತ್ರ: ಶಾಸಕ ಅಭಯ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ರೈತರಿಂದ ಹಣ ವಸೂಲಿ ಮಾಡುವುದೇ ದೊಡ್ಡ ಸಾಧನೆ ಮಾಡಿಕೊಂಡಿದೆ. ನೋಂದಣಿ ಶುಲ್ಕ ಶೇ.150, ಜನನ, ಮರಣ ಪ್ರಮಾಣ ಶುಲ್ಕ ಶೇ.100ರಷ್ಟು ಹೆಚ್ಚಳ ಮಾಡಿದೆ. ಜನರಿಗೆ ಬೇಕಾಗುವ ಅಗತ್ಯ ವಸ್ತುಗಳ ಮೇಲಿನ ದರ ಹೆಚ್ಚಿಸಿ ಸಂಕಷ್ಟಕ್ಕೆ ತಳ್ಳಿದೆ. ಇಲ್ಲಿಯವರೆಗೆ ಯಾವುದೇ ಸರ್ಕಾರ ಇಷ್ಟೊಂದು ತೆರಿಗೆ ಹೆಚ್ಚಳ ಮಾಡಿರಲಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ತಿಳಿಸಿದರು.
ಜನರ ಮಧ್ಯೆ ಬೆಂಕಿ ಹಚ್ಚುತ್ತಿರುವ ಕಾಂಗ್ರೆಸ್: ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಗ್ಯಾರಂಟಿ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಂತಿಬಸ್ತವಾಡ ಗ್ರಾಮದಲ್ಲಿ ಇಸ್ಲಾಂ ಧರ್ಮ ಗ್ರಂಥ ಸುಟ್ಟ ಪ್ರಕರಣವನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸಬಹುದಾಗಿತ್ತು. ಆದರೆ, ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಇತರರಿದ್ದರು.
---
ಫೋಟೋ
21ಮಂಜು4-
ಬೆಳಗಾವಿ ನಗರದಲ್ಲಿ ಬುಧವಾರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್ ಅನ್ನು ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ, ಸಂಜಯ ಪಾಟೀಲ ಬಿಡುಗಡೆಗೊಳಿಸಿದರು. ಅರವಿಂದ ಪಾಟೀಲ, ಸುಭಾಷ ಪಾಟೀಲ, ಗೀತಾ ಸುತಾರ ಇತರರಿದ್ದರು.