

ಜಗಳೂರು: ಕೆರೆಗಳು ರೈತರ ಜೀವನಾಡಿ, ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಭರಮಸಮುದ್ರ ಗ್ರಾಮದ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿ, ಇತ್ತೀಚೆಗೆ ಕೆರೆ ಕಣ್ಮರೆಯಾಗುತ್ತಿವೆ. ರೈತರಿಗೆ ಕೆರೆಗಳು ಮುಖ್ಯವಾಗಿದ್ದು, ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಿರಿಗೆರೆ ಶ್ರೀಗಳ ದೂರದೃಷ್ಟಿಯಾಗಿತ್ತು. ಇಂದು 46ಕ್ಕೂ ಹೆಚ್ಚು ಕೆರೆಗಳು ತುಂಬಿ ಹರಿಯುತ್ತಿವೆ. ಎಲ್ಲೆಡೆ ಕೊಳವೆಬಾವಿಗಳು ಮರುಪೂರಣವಾಗಿವೆ. ಮುಂದಿನ ದಿನಗಳಲ್ಲಿ ಹಸಿರು ನಾಡಾಗಲಿದೆ ಎಂದು ತಿಳಿಸಿದರು.
ಭರಮಸಮುದ್ರ ಕೆರೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು, ಅನಿವಾರ್ಯತೆ ಇದ್ದರೆ ಇನ್ನೊಂದು ಕೋಟಿ ಕೊಡಲಾಗುವುದು ಎಂದರು.
10 ಕೋಟಿ ರೂ. ವೆಚ್ಚದಲ್ಲಿ ಜಗಳೂರು ಕೆರೆ ಏರಿ ಮೇಲೆ ಫುಟ್ಪಾತ್ ನಿರ್ವಣ, ವಿದ್ಯುತ್ ಬಲ್ಬ್ ಅಳವಡಿಕೆ ಸೇರಿ ಸುಂದರೀಕರಣಗೊಳಿಸಲಾಗುವುದು. ತಾಲೂಕಿನಾದ್ಯಂತ ಕೆರೆಗಳಲ್ಲಿ ನೀರು ಭರ್ತಿಯಾಗಿದ್ದು ರೈತರು ಅಡಕೆಯತ್ತ ಮುಖ ಮಾಡುತ್ತಿದ್ದಾರೆ. ಕೆರೆ ನೀರು ಖಾಲಿಯಾದ ನಂತರ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೂಳೆತ್ತುವ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ನನ್ನ ಆಡಳಿತಾವಧಿಯಲ್ಲಿ ನಡೆದ ಏತ ನೀರಾವರಿ ಯೋಜನೆ ಫಲಪ್ರದವಾಗಿ 53 ಕೆರೆಗಳಿಗೆ ಈಗಾಗಲೇ ನೀರು ಹರಿಯುತ್ತಿದೆ. ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಶಾಸಕ ಬಿ. ದೇವೇಂದ್ರಪ್ಪ ಅವರ ಸಹಕಾರದಿಂದ ಕೆರೆಗಳು ಭರ್ತಿಯಾಗುತ್ತಿದ್ದು ಅಂತರ್ಜಲ ಮಟ್ಟ ಹೆಚ್ಚಳವಾಗಿರುವುದಕ್ಕೆ ಯೋಜನೆ ಯಶಸ್ವಿಯೇ ಸಾಕ್ಷಿ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿದರು. ಮುಸ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಅಂಗವಿಕಲರ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮದ ಅಹವಾಲುಗಳನ್ನು ಶಾಸಕರ ಮುಂದಿಟ್ಟರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಪತ್ನಿ ಇಂದಿರಾ ರಾಮಚಂದ್ರ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಅಜ್ಜಯ್ಯ ನಾಡಿಗರ್, ಗ್ರಾಪಂ ಅಧ್ಯಕ್ಷ ಅಶ್ವಿನಿ ಅಂಜಿನಪ್ಪ, ಉಪಾಧ್ಯಕ್ಷ ತಿಪ್ಪೇಸ್ವಾಮಿ ಸದಸ್ಯರಾದ ಕಿರಣ್, ಬಸವರಾಜ್, ಹನುಮಕ್ಕ ಪೆದ್ದಣ್ಣ, ಲಕ್ಷ್ಮೀ ಮಹಾಂತೇಶ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತ ರೆಡ್ಟಿ, ಸುರೇಶ್, ಪ್ರಹ್ಲಾದ್, ತಿರುಕಪ್ಪರ ರಾಜಣ್ಣ ಇತರರು ಹಾಜರಿದ್ದರು.
ನೀರು ಪೋಲಾಗುವುದನ್ನು ತಪ್ಪಿಸಿ ದೇವಸ್ಥಾನ, ಹಬ್ಬಗಳಿಗೆ ದೇಣಿಗೆ ಕೇಳುವಂತೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೇಳಬೇಕು. ಗ್ರಾಮೀಣ ಪ್ರದೇಶದ ಮಕ್ಕಳ ಉಜ್ವಲ ಭವಿಷ್ಯಕ್ಕಾದರೂ ಈ ಕಾರ್ಯ ಮುತುವರ್ಜಿಯಿಂದ ಆಗಬೇಕಿದೆ ಎಂದು ಇನ್ಸೈಟ್ ಐಎಎಸ್ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಶಾಲೆಗಳಿಗೆ ಡೆಸ್ಕ್, ಗ್ರಂಥಾಲಯಕ್ಕೆ ಪುಸ್ತಕ ಕೊಡಿಸುವುದು, ಮಕ್ಕಳ ಶಾಲಾ ಶುಲ್ಕ ಕಟ್ಟಲು ಸಹಾಯ ಮಾಡಿದ್ದೇನೆ. ಹಳ್ಳಿಗಳು ಅಭಿವೃದ್ಧಿ ಆಗಬೇಕು. ಇದು ಶಿಕ್ಷಣದಿಂದ ಸಾಧ್ಯ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆಯನ್ನು ಅಲಂಕರಿಸುವತ್ತ ಗಮನಹರಿಸಬೇಕು ಎಂದರು.
ಕೃಷಿ ಮತ್ತು ನೀರಾವರಿ, ಅಂತರ್ಜಲ ಪುನರ್ಬತಿ, ಪ್ರವಾಹ ನಿಯಂತ್ರಣ, ಜೀವವೈವಿಧ್ಯತೆ ಸಂರಕ್ಷಣೆ ಮತ್ತು ಆರ್ಥಿಕ ಚಟುವಟಿಕೆಗಳ ಮೂಲವಾಗಿರುವ ಕೆರೆಗಳ ಉಳಿವು ಆಗಬೇಕು. ಅನಾವಶ್ಯಕ ನೀರು ಪೋಲಾಗುವುದನ್ನು ತಪ್ಪಿಸಬೇಕು. ಯುವ ಸಮುದಾಯದ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.