

ಮಂಡ್ಯ: ವಿಧಾನಸಭೆ ಚುನಾವಣೆಗೂ ಮುನ್ನ ರೈತರ ಹಿತ ಕಾಪಾಡುವುದಾಗಿ ಮೇಕೆದಾಟು ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎಲ್ಲರ ನಿರೀಕ್ಷೆ ಹುಸಿಗೊಳಿಸಿದೆ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್ಸಿಗರು ಎಲ್ಲಿ ಹೋಗಿದ್ದಾರೆ ಎಂದು ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಿಳುನಾಡಿನ ಡಿಎಂಕೆ ಸರ್ಕಾರ ಓಲೈಸಿಕೊಳ್ಳಲು ರಾಜ್ಯ ಸರ್ಕಾರ ರೈತರನ್ನು ಬಲಿಕೊಡುತ್ತಿದೆ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ರಾತ್ರೋರಾತ್ರಿ ನೀರು ಹರಿಸಿದೆ. ಇದೀಗ ರೈತರನ್ನು ಸಂಕಷ್ಟಕ್ಕೆ ದೂಡಿದ್ದು, ಬೀದಿಗೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದರು. ಆದರೆ ಈಗ ರೈತರ ಹಿತ ಮರೆತು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾದಾಗ ಕೇಂದ್ರ ಸಚಿವ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ ನೀಡಿ ರೈತರ ಪರ ನಿಲ್ಲಲಿಲ್ಲವೇ?. ಆದರೆ ಕಾಂಗ್ರೆಸ್ ಕಾವೇರಿ ವಿಷಯದಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದ ಗಡಿ ಕಾಯುವ ಸೈನಿಕರು ಒಂದು ಕಣ್ಣು, ಅನ್ನ ನೀಡುವ ರೈತರು ಮತ್ತೊಂದು ಕಣ್ಣು. ಹಾಗಾಗಿ ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ಕಾವೇರಿ ಹೋರಾಟಕ್ಕೆ ಬಂದಿದ್ದೇವೆ ಹೊರತು ರಾಜಕಾರಣ ಮಾಡಲು ಅಲ್ಲ. ರಾಜಕಾರಣ, ಚುನಾವಣೆ ಮತ್ತು ಅಧಿಕಾರ ಯಾವುದು ಶಾಶ್ವತವಲ್ಲ, ಕಾಂಗ್ರೆಸ್ ಸರ್ಕಾರ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕಾವೇರಿ ಹೋರಾಟ ಬೆಂಬಲಿಸಿದ್ದಾರೆ. ಬೆಂಗಳೂರು ಬಂದ್‌ಗೆ ಬಿಜೆಪಿ ಪಕ್ಷ ಬೆಂಬಲ ನೀಡಿದೆ. ರೈತರಿಗೆ ನ್ಯಾಯ ಕೊಡಿಸುವವರೆಗೂ ಹೋರಾಟ ನಿಲ್ಲದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.