

ಹರಿಹರ: ಗಮನಕ್ಕೆ ಬಾರದೆ ತಾಲೂಕಿನಲ್ಲಿ ಯಾವುದೇ ಯೋಜನೆಗಳಿಗೆ ಚಾಲನೆ ನೀಡಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಸಲ್ಲಿಸುತ್ತೇನೆ ಎಂದು ಶಾಸಕ ಬಿ.ಪಿ. ಹರೀಶ್ ಎಚ್ಚರಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಇತ್ತೀಚೆಗೆ ಹರಿಹರದಿಂದ ದಾವಣಗೆರೆ ವಿವಿಗೆ ತಡೆ ರಹಿತ ಬಸ್ ಚಾಲನೆ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಾಳೆ ಬಸ್ಗಳಿಗೆ ಚಾಲನೆ ಇದೆ ಎಂದು ರಾತ್ರಿ ನನಗೆ ತಿಳಿಸಿದ್ದಾರೆ. ಇದರ ಉದ್ದೇಶವೇನು ಎಂದು ತರಾಟೆಗೆ ತೆಗೆದುಕೊಂಡರು.
ನಗರಸಭೆಯ ಆಡಳಿತವನ್ನು ಸರಿದಾರಿಗೆ ತರಲು ಪ್ರಯತ್ನಿಸಿದ ಜಿಲ್ಲಾಧಿಕಾರಿಯವರೂ ಕೈಚೆಲ್ಲಿದ್ದಾರೆ. ಆಡಳಿತ ಸೂಕ್ತವಾಗಿ ನಡೆಯದ ಕಾರಣ ನಗರದ ನಾಗರಿಕರು ವಿವಿಧ ಸೇವೆ ಪಡೆಯಲು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ನಗರಸಭೆಯಲ್ಲಿ ಹಲವರು ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ. ಈಗ ಬಿಲ್ ಕಲೆಕ್ಟರನ್ನು ಪ್ರಭಾರ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರನ್ನಾಗಿ ನೇಮಿಸಿ ಜನರ ಕೆಲಸ ಮಾಡಿಕೊಡುವ ಪ್ರಯತ್ನ ನಡೆದಿದೆ ಎಂದರು.
ಕೆಡಿಪಿ ಸದಸ್ಯ ಮಲ್ಲೇಶ್ ಮಾತನಾಡಿ, ಬೆಳ್ಳೂಡಿ- ರಾಮತೀರ್ಥ ನಡುವಿನ ಸೇತುವೆ ಇಕ್ಕೆಲದ ಮಣ್ಣು ಪ್ರವಾಹದಲ್ಲಿ ಹರಿದು ಹೋಗಿ ಹಲವು ವರ್ಷಗಳಿಂದ ಸಂಪರ್ಕ ಕಡಿತವಾಗಿದೆ. ಈ ಬಗ್ಗೆ ಯಾರೊಬ್ಬರೂ ಗಮನಿಸಿಲ್ಲ. ಜತೆಗೆ ತಾಲೂಕಿನಲ್ಲಿರುವ ಏತ ನೀರಾವರಿ ಯೋಜನೆಯ ಸಂಪೂರ್ಣ ಲಾಭ ರೈತರಿಗೆ ಸಿಗುತ್ತಿಲ್ಲ ಎಂದು ತಿಳಿಸಿದರು.
ಪಂಚಾಯತ್ರಾಜ್ ಇಲಾಖೆ ಎಇಇ ಗಿರೀಶ್ ಮಾತನಾಡಿ, ನಗರದ ಗಂಗಾನಗರಕ್ಕೆ ನದಿ ಹಾಗೂ ಹಳ್ಳದ ಪ್ರವಾಹ ನೀರು ಬಾರದಂತೆ ತಡೆಯಲು ಗೋಡೆ ನಿರ್ವಿುಸಲು 71 ಲಕ್ಷ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಆದರೆ ಆ ಗೋಡೆ ನಿರ್ವಣದಿಂದಲೂ ಪೂರ್ಣ ಪ್ರಮಾಣದಲ್ಲಿ ಪ್ರವಾಹ ತಡೆಯುವುದು ಕಷ್ಟಕರ ಎಂದರು.
ಕೃಷಿ ಇಲಾಖೆ ಎಡಿ ನಟರಾಜ್ ಮಾತನಾಡಿ, ಮುಂಗಾರು ಹಂಗಾಮಿಗೆ ಅಗತ್ಯವಾದ ಬೀಜ ಮತ್ತು ಗೊಬ್ಬರಗಳ ಸೂಕ್ತ ದಾಸ್ತಾನು ಇದೆ. ರೈತರಿಗೆ ಯಾವುದೇ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಾಪಂ ಇಒ ಎಸ್.ಪಿ. ಸುಮಲತಾ, ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ನಾಮನಿರ್ದೇಶಿತ ಸದಸ್ಯರಿದ್ದರು.