

ಹರಿಹರ: ಪ್ರಸ್ತುತ ಭಾರತ ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು, ಯುವಜನತೆ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ಸ್ಕೌಟ್ ಮತ್ತು ಗೈಡ್, ರೆಡ್ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಿರಾಸೆಯ ಭಾವದಲ್ಲಿರುವ ಪದವೀಧರರಿಗೆ ಮತ್ತು ಯುವ ಪೀಳಿಗೆಗೆ ಒಳ್ಳೆಯ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇದು ಉಜ್ವಲ ಭವಿಷ್ಯದ ನಿರ್ವಣಕ್ಕೆ ಸಹಕಾರಿಯಾಗಿದೆ. ದೇಶದಲ್ಲಿನ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಸಾಧಿಸುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಹೊಂದುವಂತೆ ಹಾರೈಸಿದರು.
ಯುವಕರು ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಿ ದೈಹಿಕ ಶ್ರಮಕ್ಕೆ ಆದ್ಯತೆ ನೀಡಬೇಕು. ಪಾಲಕರೇ ಮಕ್ಕಳ ಮೊಬೈಲ್ ಗೀಳಿಗೆ ಕಾರಣರಾಗುತ್ತಿದ್ದಾರೆ. ಇದು ಅನಾರೋಗ್ಯ ಸಮಾಜ ನಿರ್ವಣಕ್ಕೆ ನಾಂದಿ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ಧನಮಠದ ಜನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ವಿದ್ಯೆ ಮತ್ತು ವಿದ್ವತ್ತು ಎರಡು ಭಿನ್ನ. ವಿದ್ಯೆ ಎಂಬುದು ಜ್ಞಾನಾರ್ಜನೆ, ಕಲಿಕೆಯ ಭಾಗವಾದರೆ, ವಿದ್ವತ್ತು ವಿಮರ್ಶಾತ್ಮಕವಾದ ಮತ್ತು ರ್ತಾಕ ಆಲೋಚನಾ ಕ್ರಮವನ್ನು ರೂಢಿಸುತ್ತದೆ ಎಂದು ತಿಳಿಸಿದರು.
ಶ್ರಮ, ಕ್ರಮ, ಪರಿಶ್ರಮ, ಪರಾಕ್ರಮ ಮತ್ತು ವಿಕ್ರಮ ಎಂಬ ಯುಗಧರ್ಮದ ತತ್ವಗಳನ್ನು ವಿದ್ಯಾರ್ಥಿ ದೆಸೆಯಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಿ. ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಿ. ರೋಗಪೀಡಿತ ಜನತೆ ದೇಶಕ್ಕೆ ಮಾರಕ. ರಸ್ತೆ ಬದಿಯ ಆಹಾರವನ್ನು ಸೇವಿಸುವುದು ಉತ್ತಮವಲ್ಲ ಎಂದು ವಿದ್ಯಾರ್ಥಿಗಳಿಗೆ ವಚನ ಮತ್ತು ಗೀತೆಯನ್ನು ಹಾಡುವ ಮೂಲಕ ಮನವರಿಕೆ ಮಾಡಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಂ.ಎನ್. ರಮೇಶ್ ವಹಿಸಿದ್ದರು. ಇದೇ ವೇಳೆ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಸಿಂಧು ಬಣಗಾರ್, ಎಂ.ಪಿ. ಲಕ್ಷ್ಮೀ, ಜೆ.ಪಿ. ಸಹನಾ, ಪಿ.ಡಿ. ಪ್ರಿಯಾಂಕಾ ಇವರಿಗೆ ದಾನಿಗಳಾದ ಸುನಂದಮ್ಮ ಮುನಿಯಪ್ಪ ಅವರು ತಲಾ ಹತ್ತು ಸಾವಿರ ನಗದು ಬಹುಮಾನ ವಿತರಿಸಿದರು. ಇತ್ತೀಚೆಗೆ ಪಿಎಚ್.ಡಿ ಪದವಿ ಪಡೆದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಎಂ.ಎನ್. ಮಾಲತೇಶ ಅವರನ್ನು ಗೌರವಿಸಲಾಯಿತು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ವಿಜಯ ಮಹಾಂತೇಶ್, ತಾಲೂಕು ಖಜಾನಾಧಿಕಾರಿ ಎಂ.ಬಿ. ಮಂಜುನಾಥ್, ಡಾ.ಎಚ್.ಪಿ. ಅನಂತನಾಗ್, ಡಾ.ಎಂ. ಕುಮಾರ್, ಡಾ.ಸಿ. ಚಂದ್ರಶೇಖರ್, ಡಾ.ಎಸ್. ಗಂಗರಾಜು, ಡಾ.ಬಿ.ಕೆ. ಮಂಜುನಾಥ್, ಡಾ.ಜಿ.ಎನ್. ದ್ರಾಕ್ಷಾಯಿಣಿ, ಅಬ್ದುಲ್ ಬಷೀರ್, ಡಾ. ತಿಪ್ಪೇಸ್ವಾಮಿ, ಸಿ. ಹುಚ್ಚಂಗಿ ಹಾಗೂ ಇತರರಿದ್ದರು.