

ಜಗಳೂರು: ಸಹಕಾರಿ ಸಂಘಗಳು ರೈತರಿಗೆ ಸಾಲ ಕೊಡುವುದಕ್ಕಷ್ಟೇ ಸೀಮಿತವಾಗಬಾರದು. ಜತೆಗೆ ರಸಗೊಬ್ಬರ, ಕ್ರಿಮಿನಾಶ ಔಷಧ, ಪಹಣಿ ಸೇರಿ ಇತರೆ ಸೌಲಭ್ಯಗಳನ್ನು ಒದಗಿಸುವ ಕೊಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ, ರಾಜ್ಯ ಸಹಕಾರ ಮಹಾಮಂಡಳಿ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ, ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟ, ಸಹಕಾರ ಇಲಾಖೆ ದಾವಣಗೆರೆ ಇವರ ಸಹ ಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ 27 ಸಹಕಾರ ಸಂಘಗಳಿವೆ. ಅದರಲ್ಲಿ ಐದಾರು ಸಂಘಗಳು ಮಾತ್ರ ಬೀಜ, ರಸಗೊಬ್ಬರ ವಿತರಣೆ ಮಾಡುತ್ತಿವೆ. ಎಲ್ಲ ಸಂಘಗಳು ಇದರಲ್ಲಿ ಭಾಗಿಯಾಗಬೇಕು. ರೈತರ ಆದಾಯಕ್ಕೆ ತಕ್ಕಂತೆ ಸಾಲ ನೀಡಿ ಸಹಕಾರ ನೀಡಬೇಕು. ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಒಂದು ದಿನದ ತರಬೇತಿಯಲ್ಲಿ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೇಗೆ ಸಾಧ್ಯ ಎಂದು ಸಲಹೆ ನೀಡಿದರು.
ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಸಹಕಾರ ಸಂಘವೆಂಬುದು ಸಮುದ್ರದ ಆಳವಿದ್ದಂತೆ ಎಷ್ಟು ತಿಳಿದುಕೊಂಡರೂ ಸಾಲದು. ಹಾಗಾಗಿ ಇದರ ಮೂಲ ತಿಳಿದು ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
ಸಹಕಾರ ರತ್ನ ಪುರಸ್ಕೃತ ಜಗದೀಶಪ್ಪ ಬಣಕಾರ, ಒಕ್ಕೂಟದ ಜಿಲ್ಲಾ ನಿರ್ದೇಶಕ ಎಸ್. ದೀಪಕ್ ಪಟೇಲ್, ಎಚ್.ಕೆ. ಬಸಪ್ಪ, ಕೆ. ಸುರೇಶ್, ಕೆ. ಮಹೇಶ್ವರಪ್ಪ, ಸಹಕಾರಿ ಅಭಿವೃದ್ಧಿ ಅಧಿಕಾರಿ ವಿ. ಹರೀಶ್ಕುಮಾರ್, ಎಸ್.ಜಿ. ಸತೀಶ್, ವೃತ್ತಿಪರ ನಿರ್ದೇಶಕ ಟಿ.ಎಂ. ಫಾಲಾಕ್ಷ, ಶ್ರೀನಿವಾಸ್, ವ್ಯವಸ್ಥಾಪಕ ಕೆ.ಎಂ. ಜಗದೀಶ್, ನಿವೃತ್ತ ಸಹಾಯಕ ನಿಬಂಧಕ ಲಿಯಾಖತ್ ಅಲಿ ಸೇರಿ ಮತ್ತಿತರರಿದ್ದರು.