

ಜಗಳೂರು: ಪಟ್ಟಣದ ಹೃದಯಭಾಗದಲ್ಲಿ ಮಾರುಕಟ್ಟೆ ಸ್ಥಾಪನೆ, ವ್ಯಾಪಾರಿಗಳಿಗೆ ಸ್ಮಾರ್ಟ್ ಕಾರ್ಡ್, ಜಕಾತಿಗೆ ರಸೀದಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ಸಂಘ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿತು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ಹೊರ ವಲಯದ ಮಾರುಕಟ್ಟೆಯಿಂದ ಸರಕನ್ನು ತಂದು ಜನನಿಬಿಡ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಅವರ ಅವಶ್ಯಕತೆಗಳನ್ನು ಪೂರೈಸುತ್ತಾರೆ. ಜತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದ್ದರಿಂದ ಇಂತಹ ವ್ಯಾಪಾರಸ್ಥರನ್ನು ಉತ್ತೇಜಿಸಿ ಬದುಕು ಕಟ್ಟಿಕೊಳ್ಳಲು ತೊಂದರೆ ನೀಡದೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿಯೇ ಜಕಾತಿ ಪಡೆಯುವ ಜವಾಬ್ದಾರಿಯನ್ನು ತೆಗೆದುಕೊಂಡು ಕ್ರಮಬದ್ಧವಾಗಿ ಅದನ್ನು ಬೀದಿಬದಿ ವ್ಯಾಪಾರಸ್ಥರಿಂದ ಪಡೆಯಬೇಕು. ಆ ಹಣವನ್ನು ವ್ಯಾಪಾರಸ್ಥರ ಕಲ್ಯಾಣಕ್ಕಾಗಿ ಮೀಸಲಿಡಬೇಕು. ಕಳೆದ ಬಾರಿ ನೀಡಿದ ಭರವಸೆಯಂತೆ ಬೀದಿ ವ್ಯಾಪಾರಿಗಳಿಂದ 5 ರೂ. ಹಾಗೂ ತಿಂಡಿ ಗಾಡಿಗಳಿಂದ 10 ರೂ. ಪಡೆಯಬೇಕು ಎಂದು ಒತ್ತಾಯಿಸಿದರು.
ಜಕಾತಿ ಸಂಗ್ರಹಿಸುವ ಕೆಲಸವನ್ನು ಖಾಸಗಿಯವರಿಗೆ (ಟೆಂಡರ್) ನೀಡಬಾರದು. ಜಕಾತಿ ಪಡೆಯುವಾಗ ತಪ್ಪದೇ ನಗರಸಭೆಯ ಮೊಹರು ಇರುವ ರಸೀದಿ ನೀಡಬೇಕು. ಪಪಂ ನಿರ್ಧರಿಸಿದ ಮೊತ್ತವನ್ನು ಮಾತ್ರ ವ್ಯಾಪಾರಸ್ಥರಿಂದ ಪಡೆಯಬೇಕು. ಬೀದಿಬದಿ ವ್ಯಾಪಾರಸ್ಥರಿಗೆ ಕೂಡಲೇ ಸ್ಮಾರ್ಟ್ ಕಾರ್ಡ್ ವಿತರಿಸಬೇಕು. ಶೀಘ್ರದಲ್ಲಿಯೇ ಜಗಳೂರಿನ ಮಧ್ಯಭಾಗದಲ್ಲಿ ಮಾರುಕಟ್ಟೆಯನ್ನು ಸ್ಥಾಪಿಸಬೇಕು ಮತ್ತು ಯಾವುದೇ ಕಾರಣಕ್ಕೂ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಬಾರದು ಎಂದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಬೇಡಿಕೆಗಳನ್ನು ಈಡೇರಿಸಲು ಬದ್ಧ, ಆದರೆ ಕಾಲಾವಕಾಶ ಬೇಕಾಗುತ್ತದೆ. ನೀವು ಮಾಡುವ ಹೋರಾಟದಲ್ಲಿ ನ್ಯಾಯವಾಗಿರುವುದನ್ನು ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ. ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧನಿದ್ದೇನೆ ಎಂದರು.
ಪಪಂ ಸದಸ್ಯ ಶಕೀಲ್ ಅಹಮದ್, ಬೀದಿಬದಿ ವ್ಯಾಪಾರಿಗಳ ಜಿಲ್ಲಾ ಕಾರ್ಯದರ್ಶಿ ಭಾರತಿ, ಹರಿಹರ ತಾಲೂಕಾಧ್ಯಕ್ಷೆ ಮಂಜುಳಾ, ತಾಲೂಕಾಧ್ಯಕ್ಷ ಹುಸೇನ್ ಸಾಬ್, ತಾಲೂಕು ಕಾರ್ಯದರ್ಶಿ ಮಂಜಮ್ಮ, ಪದಾಧಿಕಾರಿಗಳಾದ ತಿಪ್ಪಮ್ಮ, ರುದ್ರಮ್ಮ, ರಹಮತ್ಉಲ್ಲಾ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಸೇರಿ ಮತ್ತಿತರರಿದ್ದರು.