

ಜಗಳೂರು: ರಾಷ್ಟ್ರೀಯ ಹಬ್ಬಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಗೈರಾದರೆ ಸಹಿಸುವುದಿಲ್ಲವೆಂದು ಶಾಸಕ ಬಿ. ದೇವೇಂದ್ರಪ್ಪ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಅಧಿಕಾರಿಗಳು ಸಿದ್ಧರಾಗಬೇಕು. ನ.1 ರ ಬೆಳಗ್ಗೆ ತಮ್ಮ ಕಚೇರಿಗಳಲ್ಲಿ ಸಾಂಕೇತಿಕವಾಗಿ ಆಚರಿಸಿ, ತಾಲೂಕು ಕಚೇರಿಗೆ ಆಗಮಿಸಬೇಕು. ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮಹಾನ್ ದಾರ್ಶನಿಕರ ಜಯಂತಿ ನಿರ್ಲಕ್ಷಿಸುವವರನ್ನು ಎಂದಿಗೂ ಸಹಿಸುವುದಿಲ್ಲ. ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಉನ್ನತ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ದಲಿತ ಮುಖಂಡ ಗೌರಿಪುರ ಸತ್ಯಮೂರ್ತಿ ಮಾತನಾಡಿ, ಪ್ರತಿಯೊಂದು ಜಯಂತಿ ಆಚರಣೆಯಲ್ಲೂ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಪೂರ್ವಭಾವಿ ಸಭೆ ಅಥವಾ ಜಯಂತಿಗಳಿಗೆ ತಮ್ಮ ಸಿಬ್ಬಂದಿಯನ್ನು ಕಳಿಸಿ ಮನೆಯಲ್ಲಿರುತ್ತಾರೆ. ಸರ್ಕಾರದಿಂದ ಸಂಬಳ ತೆಗೆದುಕೊಂಡು ದಾರ್ಶನಿಕರಿಗೆ ಅಗೌರವ ತೋರುವುದು ಎಷ್ಟು ಸರಿ? ಇನ್ನು ಹಳ್ಳಿಗಳಿಂದ ಬರುವ ಜನರಿಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲವೆಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಕಿವಿಯಾಗಬೇಕು. ಅಕ್ಷರ ಜ್ಞಾನವಿಲ್ಲದ ಅನೇಕ ಮುಗ್ದರು ಸರ್ಕಾರಿ ಕಚೇರಿಗಳಿಗೆ ಬಂದಾಗ ಸೌಜನ್ಯದಿಂದ ವರ್ತಿಸಬೇಕು. ಯಾವ ಕೆಲಸಕ್ಕೆ ಬಂದಿದ್ದಾರೆ ಎಂದು ತಿಳಿದುಕೊಳ್ಳಬೇಕು. ಅಧಿಕಾರ ದುರುಪಯೋಗ ಮಾಡಿಕೊಂಡರೆ ಸುಮ್ಮನಿರುವುದಿಲ್ಲವೆಂದರು.
ದಲಿತ ಮುಖಂಡ ಸಿ. ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಕೆಲ ದಿನಗಳ ಹಿಂದೆ ವೇದಿಕೆ ಕಾರ್ಯಕ್ರಮದಲ್ಲಿ 9 ರಿಂದ 13 ಜನರಿಗೆ ಮಾತ್ರ ಸೀಮಿತಗೊಳಿಸಿ ಶಿಷ್ಟಾಚಾರ ಆದೇಶ ಹೊರಡಿಸಿದೆ. ತಹಸೀಲ್ದಾರ್ಗೆ ಅದರ ಬಗ್ಗೆ ಗೊತ್ತಿದೆಯಾ? ಆದೇಶ ಪ್ರತಿ ಇದ್ದರೆ ಅಧಿಕಾರಿಗಳಿಗೆ, ಸಂಘ- ಸಂಸ್ಥೆ ಮುಖಂಡರಿಗೆ ನೀಡಿ ಎಂದರು.
ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ಹೋರಾಟಗಾರ ಮಂಜಪ್ಪ ಮಾತನಾಡಿದರು.
ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ತಾಪಂ ಇಒ ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್್ಕ ಬಿಇಒ ಈ. ಹಾಲಮೂರ್ತಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದಲ್ಲಿ ನಾಡು ನುಡಿಗಾಗಿ ಸಾಧನೆ ಮಾಡಿದ ಶ್ರೇಷ್ಠ ಛಾಯಾಗ್ರಾಹಕ ಮಂಜುನಾಥ್, ಕೆಎಸ್ಆರ್ಟಿಸಿ ಡಿಟಿಒ ಅಧಿಕಾರಿ ಮರೇನಹಳ್ಳಿ ಫಕ್ರುದ್ದೀನ್, ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಎಸ್.ಆರ್. ಓಬಳೇಶ್, ಏಷ್ಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿದ ಭಾಸ್ಕರ್ ರಾವ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.