ಇತರರ ಕಷ್ಟಕ್ಕೆ ನೆರವಾದರೆ ಬದುಕು ಸಾರ್ಥಕ

JLR ph 3 May 24 Mukti Vahana bidugade
Published on

ಜಗಳೂರು: ಸಮಾಜದಲ್ಲಿ ಸಾಕಷ್ಟು ಬಡ ಜನರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಅಂಥವರ ನೆರವಿಗೆ ಧಾವಿಸಿ ಸೇವೆ ಮಾಡಿದರೆ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಜೈ ಭಾರತ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಮುಕ್ತಿ ವಾಹನ ಸೇವೆ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಣ, ಅಧಿಕಾರ, ಅಂತಸ್ತು ಒಲಿದಾಗ ಮಾನವ ಸ್ವಾರ್ಥ ಜೀವಿಯಾಗಿ ಬದುಕಿದ ಸಾಕಷ್ಟು ಉದಾಹರಣೆಗಳಿವೆ. ಆದರೆ ಹನುಮಂತಾಪುರ ಗ್ರಾಮದ ಬರ್ಕತ್ ಆಲಿ ಮತ್ತು ಅವರ ಕುಟುಂಬ ಜೈ ಭಾರತ್ ಟ್ರಸ್ಟ್ ಪ್ರಾರಂಭಿಸಿ ಅನೇಕ ಸಮಾಜ ಸೇವಾ ಕೈಂಕರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈಗಾಗಲೇ ಬಡವರಿಗೆ ಉಚಿತವಾಗಿ ಎರಡು ಆಂಬುಲೆನ್ಸ್ ಸೇವೆಗಳನ್ನು ನೀಡುತ್ತಿದ್ದು, ಸಾವಿರಾರು ಜನರಿಗೆ ಸಹಕಾರಿಯಾಗಿದೆ. ಈಗ ಖಾಸಗಿ ಮುಕ್ತಿ ವಾಹನಗಳಿಗೆ ಹಣಕೊಟ್ಟು ಶವ ಸಾಗಿಸಲು ಬಡವರು ಪಡುವ ವ್ಯಥೆಯನ್ನು ದೂರ ಮಾಡಲು ಹೊಸ ಮುಕ್ತಿವಾಹನ ಸೇವೆಯನ್ನು ನೀಡಲು ಮುಂದಾಗಿದೆ ಎಂದರು.

ಕೆಪಿಸಿಸಿ ಎಸ್ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಗಂಜಿಕೇಂದ್ರ, ಆಂಬುಲೆನ್ಸ್, ಮುಕ್ತಿ ವಾಹನಗಳ ಉಚಿತ ಸೇವೆ ನೀಡಲಾಗುತ್ತಿದ್ದು, ಇದಕ್ಕೆ ನಮ್ಮ ಸಹಕಾರವಿರುತ್ತದೆ ಎಂದರು.

ವೈದ್ಯಾಧಿಕಾರಿ ಡಾ. ಷಣ್ಮುಖಪ್ಪ, ಪಪಂ ಸದಸ್ಯರಾದ ಲುಕ್ಮಾನ್ ಖಾನ್, ಮಂಜಕ್ಕ, ಮಂಜುನಾಥ್, ಜೈ ಭಾರತ್ ಟ್ರಸ್ಟ್​ನ ಬರ್ಕತ್ ಅಲಿ, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಮುಖಂಡರಾದ ಬಂಗ್ಲೆ ಪರ್ವಿಜ್, ಕಿರಣ್, ಕೂಡ್ಲಿಗಿ ಶಬ್ಬಿರ್, ಸೂರಯ್ಯ, ವಾಮಣ್ಣ, ಕಾಂತರಾಜ್ ಪ್ರಕಾಶರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ ಸೇರಿ ಮತ್ತಿತರರಿದ್ದರು.

ಪ್ರತಿ ತಿಂಗಳು 50 ಸಾವಿರ ದೇಣಿಗೆ: ಪಟ್ಟಣಕ್ಕೆ ಮುಕ್ತಿ ವಾಹನದ ಅವಶ್ಯಕತೆ ಇತ್ತು. ಈ ಕಾರ್ಯ ಸರ್ಕಾರದಿಂದ ಆಗಬೇಕಿತ್ತು. ಆದರೆ ಜೈ ಭಾರತ್ ಟ್ರಸ್ಟ್ ಸರ್ಕಾರದ ಒಂದು ಅಂಗವಾಗಿ ಕೆಲಸ ಮಾಡಿದೆ. ಕೊಟ್ಟ ಕಾಲಕ್ಕೆ ಕರೆದು ದಾನವ ಮಾಡು ಎಂಬ ಮಾತಿನಂತೆ ಬರ್ಕತ್ ಅಲಿ ಮಾಡುತ್ತಿರುವ ಕೆಲಸಕ್ಕೆ ನಾನು ಕೂಡ ಕೈ ಜೋಡಿಸುತ್ತೇನೆ. ನನಗೆ ಪ್ರತಿ ತಿಂಗಳು ಬರುವ ಸಂಬಳದಲ್ಲಿ ಮುಕ್ತಿ ವಾಹನದ ಪೆಟ್ರೋಲ್ ಮತ್ತು ಚಾಲಕನ ವೇತನಕ್ಕೆ 50 ಸಾವಿರ ದೇಣಿಗೆ ನೀಡುತ್ತೇನೆ ಎಂದು ಶಾಸಕ ಬಿ. ದೇವೇಂದ್ರಪ್ಪ ಸ್ಥಳದಲ್ಲಿಯೇ 50 ಸಾವಿರ ನಗದು ನೀಡಿ ಪೋ›ತ್ಸ್ಸಾಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net