

ಜಗಳೂರು: ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತೇಜನ ನೀಡುವ ಪ್ರಧಾನ ಮಂತ್ರಿ ಸ್ಕೂಲ್ ಆಫ್ ರೈಸಿಂಗ್ ಇಂಡಿಯಾ ಶಾಲೆಯನ್ನು ಪ್ರಾಯೋಗಿಕವಾಗಿ ತಾಲೂಕಿನ ಎರಡು ಕಡೆ ಪ್ರಾರಂಭಿಸಲಾಗಿದೆ. ಸಿಎಂ ಜತೆ ರ್ಚಚಿಸಿ ಮತ್ತಷ್ಟು ಶಾಲೆಗಳನ್ನು ಮಂಜೂರು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಬಿ. ದೇವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದ ಸಂತೇಪೇಟೆ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವುದು ಯೋಜನೆಯ ಆಶಯವಾಗಿದೆ. ಅತ್ಯಾಧುನಿಕ ಮಾದರಿಯಲ್ಲಿ ಮಕ್ಕಳಿಗೆ ಬೋಧನಾ ಸೌಲಭ್ಯ ಕಲ್ಪಿಸುವುದು. ಇದರಿಂದ ಅನೇಕ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.
ದೇಶ ಅಭಿವೃದ್ಧಿ ಸ್ಥಾನಕ್ಕೆ ಹೋಗಬೇಕಾದರೆ ತಿಳಿವಳಿಕೆ, ಜ್ಞಾನ, ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತವೆ. ಅಕ್ಷರ ಜ್ಞಾನ ಕೊಡುವ ಏಕೈಕ ಸಾಧನ ಶಿಕ್ಷಣ. ಆದ್ದರಿಂದ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಬೇಕು. ತಾಲೂಕು ಆರ್ಥಿಕವಾಗಿ ಹಿಂದುಳಿದಿರಬಹುದು, ಆದರೆ ಧಾರ್ವಿುಕ, ಶೈಕ್ಷಣಿಕವಾಗಿ ರಾಜ್ಯವೇ ಗುರುತಿಸುವ ಕೆಲಸವನ್ನು ಜಗಳೂರು ಶಾಲೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಬಿಇಒ ಹಾಲಮೂರ್ತಿ ಮಾತನಾಡಿ, ಸರ್ಕಾರಿ ಶಾಲೆ ಸಬಲೀಕರಣಕ್ಕೆ ಶ್ರಮಿಸಲಾಗುತ್ತಿದೆ. 2,82,143 ಪಠ್ಯಪುಸ್ತಕ ಬೇಡಿಕೆ ಇದೆ. ಇದರಲ್ಲಿ 2,3982 ಸರಬರಾಜು ಆಗಿದ್ದು, ಎಲ್ಲ ಶಾಲೆಗಳಿಗೆ ಕಳಿಸಲಾಗಿದೆ. 751 ಪ್ರಾಥಮಿಕ ಶಾಲೆಯ ಮಂಜೂರಾತಿ ಇದೆ, 590 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. 77 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದೆ. 165 ಸರ್ಕಾರಿ ಪ್ರೌಢ ಶಾಲೆಗಳು ಮಂಜೂರಾತಿ ಇದೆ, 139 ಶಾಲೆಗಳು ನಡೆಯುತ್ತಿವೆ. 17 ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸಿ ಗುಣ ಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ. ಹಾಲಪ್ಪ, ದೈಹಿಕ ಶಿಕ್ಷಣದ ನಿರ್ದೇಶಕ ಸುರೇಶ್ರೆಡ್ಡಿ, ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಕೀರ್ತಿಕುಮಾರ್, ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖ್ಯಶಿಕ್ಷಕಿ ಜಯಮ್ಮ, ಗುರೂಜಿ ಮಂಜುನಾಥ್, ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ಇ. ಸತೀಶ್, ಬಿಆರ್ಪಿ ಬ್ರಹ್ಮಚಾರಿ, ಸಿಆರ್ಪಿ ನಾಗಪ್ಪ, ಶೋಭಾ, ಬಿಆರ್ಪಿ ಲತಾ, ಶಿಕ್ಷಕರಾದ ವೀರೇಶ್, ಆಂಜನೇಯ, ಶಾಸಕರ ಪಿಎ ಶೇಖರಪ್ಪ ಪಲ್ಲಾಗಟ್ಟೆ ಸೇರಿ ಮತ್ತಿತರರಿದ್ದರು.
ಖಾಸಗಿ ಶಾಲೆ ವ್ಯಾಮೋಹ ಬಿಡಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಅನೇಕಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ಬಹುತೇಕ ಪಾಲಕರು ಇಂಗ್ಲಿಷ್ ಮಾಧ್ಯಮದ ವ್ಯಾಮೋಹಕ್ಕೆ ಸಿಲುಕಿ ಸರ್ಕಾರಿ ಶಾಲೆಗಳನ್ನು ಮರೆಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ. ಹಾಗಾಗಿ ಖಾಸಗಿ ಶಾಲೆ ವ್ಯಾಮೋಹ ಬಿಡಿ ಎಂದು ಶಾಸಕ ಬಿ. ದೇವೇಂದ್ರಪ್ಪ ಸಲಹೆ ನೀಡಿದರು.