

ತಿಪಟೂರು: ಮೃತಪಡದಿದ್ದರೂ, ಮೃತರ ಹೆಸರಿನಲ್ಲಿ ಖಾತೆ ಮಾಡುವುದು, ಹೆಸರು ಬದಲಾವಣೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟವರಿಗೆ ಈ ಬಗ್ಗೆ ಎಚ್ಚರಿಕೆ ಕೂಡಾ ನೀಡಲಾಗಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಬಿ.ಸಿ.ನಾಗೇಶ್ ಅಧಿಕಾರಿಗಳಿಗೆ ಎಚ್ಚರಿಸಿದರು.
ನಗರಸಭೆ ಆವರಣದಲ್ಲಿ ನನೆಗುದಿಗೆ ಬಿದ್ದಿದ್ದ ಇ-ಖಾತೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಹಣ ಕಟ್ಟುವುದು, ದಾಖಲೆ ಪರಿಶೀಲನೆ ಮತ್ತು ದಾಖಲೆ ನೀಡುವ ಬಗ್ಗೆ ನಗರಸಭೆಯ ವೆಬ್‌ಸೈಟ್‌ನಲ್ಲಿ ನೋಡಿಕೊಳ್ಳಿ ಎಂದು ಸಾರ್ವಜನಿಕರಿಗೆ ಸೂಚಿಸಿದರು. ಯಾರಿಗೂ ಲಂಚ ನೀಡಬೇಡಿ, ಮಧ್ಯವರ್ತಿಗಳ ಮೂಲಕ ಲಂಚ ನೀಡಿದರೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇಲ್ಲಿನ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೆ ನನಗೆ ಕರೆ ಮಾಡಿ, ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕಾರಣಾಂತರದಿಂದ 2019ರಿಂದ ಇ-ಖಾತೆ ನೀಡುವಲ್ಲಿ ವಿಳಂಬವಾಗಿದ್ದಕ್ಕೆ ಕರೊನಾ ಕಾರಣ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಶಾಸಕರು ಹೇಳಿದರು. ಇ-ಖಾತಾ ನಕಲು ಕೆಲ ಸಂದರ್ಭ ಅತ್ಯಗತ್ಯವಾಗಿರುತ್ತೆ. ಇದನ್ನು ಸಕಾಲದಲ್ಲಿ ನೀಡುವಲ್ಲಿ ವಿಳಂಬವಾದರೆ ಸಾರ್ವಜನಿಕರ ಸ್ವತ್ತಿನ ಖಾತೆಯ ನಕಲು ಪಡೆಯುವ ಹಕ್ಕನ್ನು ಕಸಿದಂತಾಗುತ್ತೆ, ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಎಚ್ಚರಿಸಿದ ಪರಿಣಾಮ ಬಾಕಿ ಉಳಿದಿದ್ದ 270 ಇ ಖಾತೆ ಅರ್ಜಿಗಳ ಪೈಕಿ 110 ಇ ಖಾತೆ ನೀಡಲಾಗುತ್ತಿದೆ ಎಂದರು.
ಈಗಿನ ಪದ್ಧತಿಯಿಂದ ಹೊಸ ಇ-ಖಾತೆ ಅರ್ಜಿಗಳನ್ನು 7 ದಿನಗಳ ಕಾಲಮಿತಿಯಲ್ಲಿ ನೀಡಲಾಗುವುದು ಎನ್ನಲಾಗುತ್ತಿದೆ. ಆದರೆ 2019ರಿಂದ ಬಾಕಿ ಉಳಿದಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಉನ್ನತ ವ್ಯಾಸಂಗ ಮಾಡುತ್ತಿರುವ ಐವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಸ್‌ಇಪಿ ನಿಧಿಯಡಿ ತಲಾ 15 ಸಾವಿರ ರೂಪಾಯಿ ಚೆಕ್ ನೀಡಲಾಯಿತು.
ಸಾರ್ವಜನಿಕರು ಸ್ವತ್ತಿನ ಖಾತೆ ನಕಲು ಪಡೆಯಲು ಇನ್ನೊಂದು ಜನ್ಮ ಎತ್ತಿ ಬಂದಂತಾಗಿತ್ತು. ಇದಕ್ಕಾಗಿ ವಿಷಾದಿಸುತ್ತೇನೆ, ಇನ್ನು ಮುಂದೆ ಹೀಗಾಗಲ್ಲ. ಆದರೆ, ಪ್ಲಾನಿಂಗ್ ಕಮಿಟಿಯ ಅನುಮೋದನೆ ಇಲ್ಲದೇ ನಿರ್ಮಿಸಲಾಗಿರುವ ಲೇ ಔಟ್ ಮತ್ತು ಕಟ್ಟಡಗಳಿಗೆ ಪರವಾನಗಿ ಸದ್ಯಕ್ಕಿಲ್ಲ. ಮುಂದಿನ 15 ದಿನಗಳ ಒಳಗೆ ಬಾಕಿ ಇರುವ ಖಾತಾ ನಕಲು ನೀಡಲು ಸೂಚಿಸಲಾಗಿದೆ. ಬಿ.ಸಿ.ನಾಗೇಶ್ ಶಾಸಕ