

ಮೋರಟಗಿ: ಅಲ್ಪ ಸಂಖ್ಯಾತರ ಹಿತ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗ್ರಾಮದಲ್ಲಿ ಮಂಜೂರಾದ ಶಾದಿಮಹಲ್ ಕಟ್ಟಡಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಈ ಭಾಗದಲ್ಲಿ ಶಾದಿಮಹಲ್ ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಕೊಟ್ಟ ಮಾತಿನಂತೆ ಸಿಂದಗಿ ಕ್ಷೇತ್ರದ ಮಲಘಾಣ ಹಾಗೂ ಮೋರಟಗಿ ಗ್ರಾಮಗಳಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಿ ಅನುದಾನ ತರಲಾಗಿದೆ. ಪ್ರಸಕ್ತ ವರ್ಷ ರಾಜ್ಯದ 224 ಮತಕ್ಷೇತ್ರಗಳ ಪೈಕಿ ಸಿಂದಗಿ ಕ್ಷೇತ್ರದಲ್ಲಿ ಮಾತ್ರ ಎರಡು ಶಾದಿಮಹಲ್‌ಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಸಿಂದಗಿ ಕ್ಷೇತ್ರ ವ್ಯಾಪ್ತಿಯ ಯರಗಲ್ ಬಿ.ಕೆ., ರಾಂಪುರ ಹಾಗೂ ಚಟ್ಟರಕಿ ಗ್ರಾಮಗಳಲ್ಲೂ ಶಾದಿಮಹಲ್ ಮಂಜೂರು ಹಂತದಲ್ಲಿವೆ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧವಾದ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ 5 ಕೋಟಿ ರೂ. ಅನುದಾನ ನೀಡಿದೆ. ಅಲ್ಪಸಂಖ್ಯಾತರೇ ಹೆಚ್ಚಾಗಿ ವಾಸಿಸುತ್ತಿರುವ ಸಮೀಪದ ಹೆಗ್ಗೇರಿಯಲ್ಲಿ 2.65 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಶಿವಶಂಕರ ಬಡಾವಣೆಯಲ್ಲೂ ರಸ್ತೆ ನಿರ್ಮಾಣವಾಗಿದೆ. ಸದ್ಯ ನಮ್ಮ ಸರ್ಕಾರ ಅಲ್ಪಸಂಖ್ಯಾತರಿಗೆ ಮೂಲಸೌಲಭ್ಯ ಕಲ್ಪಿಸುವ ಜೊತೆಗೆ ಅವರ ಶೈಕ್ಷಣಿಕ ಅಭಿವೃದ್ಧಿಗೂ ಬದ್ಧವಾಗಿದೆ ಎಂದರು.
ಅಂಜುಮನ್ ಸಮಿತಿ ಕಾರ್ಯದರ್ಶಿ ಮೈಬೂಬಸಾಬ ಕಣ್ಣಿ ಮಾತನಾಡಿದರು. ಸಮಸ್ತ ಅಂಜುಮನ್ ಸಮಿತಿ ವತಿಯಿಂದ ಶಾಸಕರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ನರಸಿಂಗ್‌ಪ್ರಸಾದ್ ತಿವಾರಿ, ವೀರನಗೌಡ ಪಾಟೀಲ, ನಿಂಗನಗೌಡ ಪಾಟೀಲ, ಪ್ರಕಾಶ ಅಡಗಲ್, ಮುತ್ತಪ್ಪ ಸಿಂಗೆ, ರವಿಕಾಂತ ನಡುವಿನಕೇರಿ, ಇಸ್ು ಮುಲ್ಲಾ, ಅರವಿಂದ ಹಂಗರಗಿ, ಸಾಯಿಪಟೇಲ ಅವಟಿ, ರಜಾಕ ಬಾಗವಾನ, ಸಲೀಮ್ ಕಣ್ಣಿ, ಅಬ್ಬಾಸಲಿ ಬಂಟನೂರ, ಅಬ್ಬಾಸಲಿ ಬಳೂರಗಿ, ಹಸನಸಾಬ ಶಿರಾಶ್ಯಾಡ, ಬಾಬು ಬಾಸಗಿ ಮಾಬಣ್ಣ ಗೊಗಾಡಿ ಇತರರಿದ್ದರು.