

ಧಾರವಾಡ: ರಾಜಕೀಯದಲ್ಲಿ ಎಲ್ಲರೂ ಸಚಿವ ಸ್ಥಾನ ಆಕಾಂಕ್ಷಿಗಳೇ. ಶಾಸಕರಾದವರಿಗೆ ಮುಂದಿನ ಸ್ಥಾನಕ್ಕೆ ಹೋಗುವ ಅಪೇಕ್ಷೆ ಇರುವುದು ಸಹಜ. ಪಕ್ಷದ ನಾಯಕತ್ವ ಉತ್ತಮವಾಗಿದ್ದು ನಾಯಕರು ಕೈಗೊಳ್ಳುವ ತೀರ್ವನಕ್ಕೆ ಬದ್ಧನಾಗಿದ್ದೇನೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷ ನನಗೆ ಶಾಸಕನಾಗುವ ಅವಕಾಶ ನೀಡಿದೆ. ಇದರ ಜತೆಗೆ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನೂ ನೀಡಿದೆ. ಹೀಗಾಗಿ, ಹೆಚ್ಚಿನ ಕೆಲಸ ಮಾಡುತ್ತಿದ್ದೇನೆ. ಮಂತ್ರಿಗಿರಿ ಬೇಕು ಎಂದು ನಾನಾಗಿಯೇ ಪಕ್ಷವನ್ನು ಕೇಳುವ ಅಗತ್ಯತೆ ಇಲ್ಲ ಎಂದರು.
ಕ್ಷೇತ್ರದ ಜನರು ಸಚಿವನಾಗಬೇಕು ಎನ್ನುತ್ತಿದ್ದಾರೆ. ನಮ್ಮ ಕ್ಷೇತ್ರದ ಶಾಸಕರು ಮಂತ್ರಿಯಾಗಲಿ ಎಂಬ ಅಪೇಕ್ಷೆ ಸಹಜ. ಆದರೆ, ನಾನು ಸಚಿವ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸೂಕ್ತ ಸಮಯ ಬಂದಾಗ ನಾಯಕರು ಯೋಗ್ಯ ನಿರ್ಣಯ ಕೈಗೊಳ್ಳುತ್ತಾರೆ. ನಾಯಕರೇ ಕೆಲಸ ಗುರುತಿಸಿ ಸೂಕ್ತ ಸಮಯದಲ್ಲಿ ಸ್ಥಾನ ನೀಡುತ್ತಾರೆ ಎಂದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ತಪ್ಪು ಕಲ್ಪನೆಯಾಗಿದೆ ಎಂದರು.
ಧಾರವಾಡದ ಹದಗೆಟ್ಟ ರಸ್ತೆಗಳ ಕುರಿತು ಪ್ರತಿಕ್ರಿಯೆ ನೀಡಿದ ಬೆಲ್ಲದ, ಗಾಂಧಿನಗರ, ಕುಸುಮನಗರ, ಮಂಜುನಾಥಪುರ ಸೇರಿ ನಗರದ ಐದು ಪ್ರಮುಖ ರಸ್ತೆಗಳು ಹದಗೆಟ್ಟಿವೆ. ಇವು ಕಳೆದ ವರ್ಷವೇ ಸುಧಾರಣೆ ಆಗಬೇಕಿತ್ತು. ಆಗ ಅತಿವೃಷ್ಟಿ, ಕರೊನಾ ಹಿನ್ನೆಲೆಯಲ್ಲಿ ತಡವಾಗಿದೆ. ಅವು ಸುಧಾರಣೆ ಆಗದೆ ಇರುವುದಕ್ಕೆ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ. ಈ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ನವೆಂಬರ್ನಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.