

ತೀರ್ಥಹಳ್ಳಿ: ದಿನನಿತ್ಯ ಸ್ವಚ್ಛತಾ ಕಾರ್ಯ ನಿರ್ವಹಿಸುವ ಮೂಲಕ ನಮ್ಮ ಬದುಕನ್ನು ಸಹನೀಯಗೊಳಿಸುವ ಪೌರ ಕಾರ್ಮಿಕರ ಸೇವೆ ಅನನ್ಯ. ಇವರ ಸೇವೆ ಬಗ್ಗೆ ನಾಗರಿಕ ಸಮಾಜ ಗೌರವ ಭಾವನೆ ಹೊಂದಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣ ಪಂಚಾಯಿತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸೋಮವಾರ ಪಟ್ಟಣದ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ಪೌರ ಕಾರ್ಮಿಕ ಮಹಿಳೆಯಿಂದ ದೀಪ ಬೆಳಗಿಸುವ ಮೂಲಕ ಅವರಿಗೆ ಗೌರವ ತೋರಿಸಿ ನಂತರ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರೇ ಪೌರ ಕಾರ್ಮಿಕರ ಕಾಲು ತೊಳೆದು ತಮ್ಮ ಗೌರವ ತೋರಿದ್ದಾರೆ. ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ದುಡಿಯುವ ಪೌರ ಕಾರ್ಮಿಕರನ್ನು ಗೌರವಿಸುವುದು ಸಾರ್ಥಕ ಕಾರ್ಯಕ್ರಮ. ನಮ್ಮ ಮನೆ ಕಸವನ್ನು ನಾವೇ ವಿಲೇವಾರಿ ಮಾಡುವಂತಾಗಬೇಕು. ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿ ಪಪಂಗೆ ದೊಡ್ಡ ಸವಾಲಾಗಿದೆ. ಹಸಿ ಮತ್ತು ಒಣ ಕಸ ಬೇರ್ಪಡಿಸಿ ಕೊಡುವ ವಿಚಾರದಲ್ಲೂ ಕೆಲ ಸಾರ್ವಜನಿಕರು ಸಹಕರಿಸದಿರುವುದು ಬೇಸರದ ಸಂಗತಿ ಎಂದರು.
ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಸಹಕಾರಿ ಮುಖಂಡ ಕೆ.ನಾಗರಾಜ ಶೆಟ್ಟಿ, ಮುಖ್ಯಾಧಿಕಾರಿ ನಾಗರಾಜ್ ಹಾಗೂ ಪಪಂ ಸದಸ್ಯರು ಉಪಸ್ಥಿತರಿದ್ದರು.