

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿಯೇ ಬರಪೀಡಿತ ಎನ್ನಿಸಿಕೊಂಡಿರುವ ಬಸರಾಳು ಹೋಬಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆನ್ನುವುದು ಹಲವು ದಶಕದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಣಿಗ ಅವರು ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಸಿದರಲ್ಲದೆ, ಹೋಬಳಿಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಬಸರಾಳು ಹೋಬಳಿ ಬರನಾಡಂತಿದೆ. ಕೆಆರ್‌ಎಸ್ ಅಣೆಕಟ್ಟೆ ಕೆಲವೇ ಕಿ.ಮೀ ದೂರದಲ್ಲಿದ್ದರೂ ಬಸರಾಳು ಭಾಗಕ್ಕೆ ಕಾವೇರಿ ನೀರು ಬರಲ್ಲ. ಹೊರಗಿನವರಿಗೆ ಇದು ನಿಜಕ್ಕೂ ಆಶ್ಚರ್ಯ ಎನ್ನಿಸುತ್ತದೆ. ಆದರೆ ಅದೇ ಸತ್ಯ. ಕಾವೇರಿ ನೀರಿಲ್ಲದ ಪರಿಣಾಮ ಇಂದಿಗೂ ಭತ್ತ ಬೆಳೆಯಲು ಆ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಂತೆಯೇ ರಾಗಿ, ಜೋಳದ ಬೆಳೆಯನ್ನು ಅವಲಂಬಿಸಿದ್ದಾರೆ. ಹೇಮಾವತಿ ಡ್ಯಾಂನಿಂದ 250 ಕಿ.ಮೀ ನೀರು ಹರಿಸಿ ಬಸರಾಳು ಭಾಗಕ್ಕೆ ಹರಿಸಲಾಗುತ್ತಿದೆ. ಇದರ ಬದಲು ಶ್ರೀರಂಗಪಟ್ಟಣದಿಂದಲೇ ಏತ ನೀರಾವರಿ ಮೂಲಕ ಬಸರಾಳು ಭಾಗಕ್ಕೆ ನೀರು ಹರಿಸಿಕೊಟ್ಟರೆ ದೊಡ್ಡ ಮಟ್ಟದ ಅನುಕೂಲವಾಗುತ್ತದೆ. ಜತೆಗೆ ನಮ್ಮ ಸರ್ಕಾರವನ್ನು ಸದಾ ನೆನೆಸಿಕೊಳ್ಳುತ್ತಾರೆ. ಜತೆಗೆ ಆರು ಚೆಕ್ ಡ್ಯಾಂಗಳ ಅವಶ್ಯಕತೆ ಇದೆ ಎಂದರು.
ಇದಕ್ಕೆ ಸ್ಪಂದಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಧ್ಯಕ್ಕೆ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಈಗ ಏತ ನೀರಾವರಿ ಅನುಷ್ಠಾನಕ್ಕೆ ಮನವಿ ಮಾಡುತ್ತಿದ್ದಾರೆ. ಈ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿ. ಪರಿಶೀಲಿಸಿ ಕ್ರಮ ವಹಿಸುವುದಾಗಿ ಹೇಳಿದರು.
ಅಂತರ್ಜಲ ಮರುಪೂರಣಕ್ಕೆ ಕ್ರಮ
ರಾಜ್ಯದ ಹಲವೆಡೆ ಸಣ್ಣ ನೀರಾವರಿ ನಿರ್ಮಿತಿಗಳಲ್ಲಿ ಶೇಖರಣೆಗೊಳ್ಳುವ ಮೇಲ್ಮೈ ಜಲ ಇಂಗುವಿಕೆಯಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾಹಿತಿ ನೀಡಿದ್ದಾರೆ.
ಅಂತರ್ಜಲ ವೃದ್ಧಿಗೆ ಕೈಗೊಂಡಿರುವ ಕ್ರಮದ ಕುರಿತಂತೆ ಶಾಸಕ ರವಿಕುಮಾರ್ ಗಣಿಗ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿರುವ ಸಚಿವರು, ಅಂತರ್ಜಲ ಕಡಿಮೆಯಾಗಿರುವ ಪ್ರದೇಶದಲ್ಲಿ ಹಂತ ಹಂತವಾಗಿ ಅಂತರ್ಜಲ ಮರುಪೂರಕ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಎರಡು ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ 38.54 ಎಂಸಿಎ್ಟಿ ನೀರಿನ ಪ್ರಮಾಣ ಸಂಗ್ರಹವಿದೆ ಎಂದಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2 ಕೋಟಿ ರೂ ವೆಚ್ಚದಲ್ಲಿ ಸಾತನೂರು ಕೆರೆ, 25 ಲಕ್ಷ ರೂ ವೆಚ್ಚದಲ್ಲಿ ದೊಡ್ಡಕೊತ್ತಗೆರೆಯ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ಪಂಪು ಮೋಟಾರ್ ಅಳವಡಿಸಿ ವಿದ್ಯುದ್ದೀಕರಣ ಕಲ್ಪಿಸುವ ಕಾಮಗಾರಿ, 25 ಲಕ್ಷ ರೂ ವೆಚ್ಚದಲ್ಲಿ ಚೋಕನಹಳ್ಳಿಯಲ್ಲಿ ಕೊಳವೆ ಬಾವಿ ಕೊರೆದು ಪಂಪು ಮೋಟಾರ್ ಅಳವಡಿಸಿ ವಿದ್ಯುದ್ದೀಕರಣ ಕಲ್ಪಿಸುವ ಕಾಮಗಾರಿ, 5 ಲಕ್ಷ ರೂ ವೆಚ್ಚದಲ್ಲಿ ಹುಲಿವಾನದಲ್ಲಿ ಕೊಳವೆ ಬಾವಿ ಕೊರೆದು ಪಂಪು ಮೋಟಾರ್ ಅಳವಡಿಸಿ ವಿದ್ಯುದ್ದೀಕರಣ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. 2 ಕೋಟಿ ರೂ ವೆಚ್ಚದಲ್ಲಿ ಕೀಲಾರ ಹಾಗೂ 1 ಕೋಟಿ ರೂ ವೆಚ್ಚದಲ್ಲಿ ಬಸರಾಳು ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ಕಾರ್ಯದೇಶವಾಗಿದೆ. ನೀರು ಇರುವುದರಿಂದ ಕಾಮಗಾರಿ ಪ್ರಾರಂಭವಾಗಿಲ್ಲವೆಂದಿದ್ದಾರೆ.