

ಹುಬ್ಬಳ್ಳಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಹುಬ್ಬಳ್ಳಿಯ ಶಿರಡಿನಗರದಲ್ಲಿ ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಜಿ ಪ್ಲಸ್ 3 ಮಾದರಿಯಲ್ಲಿ ನಿರ್ವಣಗೊಳ್ಳುತ್ತಿರುವ 224 ಆಶ್ರಯ ಮನೆಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಕೆಲಸ ಪ್ರಗತಿಯಲ್ಲಿ ಇರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಕೆಲಸ ಪ್ರಾರಂಭವಾಗಿದ್ದು, ಈಗ ಕೇವಲ ಪಿಲ್ಲರ್ ಹಂತದಲ್ಲೇ ಇರುವುದನ್ನು ನೋಡಿ ಆಕ್ರೋಶಗೊಂಡ ಟೆಂಗಿನಕಾಯಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಪ್ರತಿನಿಧಿಗೆ ತರಾಟೆಗೆ ತೆಗೆದುಕೊಂಡರು.
ಶೇ. 90 ರಷ್ಟು ಫಲಾನುಭವಿಗಳು ಮುಂಗಡವಾಗಿ ಹಣವನ್ನು ಕಟ್ಟಿರುತ್ತಾರೆ. ಎರಡು ವರ್ಷಗಳು ಕಳೆದರೂ ಕಾಮಗಾರಿ ಪ್ರಗತಿಯಲ್ಲಿ ಇಲ್ಲದಿರುವುದಕ್ಕೆ ಕಾರಣವೇನೆಂದು ಟೆಂಗಿನಕಾಯಿ ಪ್ರಶ್ನಿಸಿದರು. ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಲಿಲ್ಲ. ವಾರದೊಳಗೆ ಸಭೆಯನ್ನು ಕರೆಯುತ್ತೇವೆ, ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಶಾಸಕ ಟೆಂಗಿನಕಾಯಿ ಅಧಿಕಾರಿಗೆ ಸೂಚಿಸಿದರು.
ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ್ ಮಾತನಾಡಿ, ಇಲ್ಲಿಯ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಕಳೆದ ತಿಂಗಳು ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ ಅವರೊಂದಿಗೆ ಬೆಂಗಳೂರಿಗೆ ತೆರಳಿ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೆಂಕಟೇಶ(ಕೆಎಎಸ್), ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನರಾಜ ಸಿಂಗ್ ಅವರನ್ನು ಭೇಟಿ ಮಾಡಿ ವಿವರಿಸಿದ್ದೇವೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ, ಸಂತೋಷ ಚವಾಣ, ರೂಪಾ ಶೆಟ್ಟಿ, ಸಿದ್ದು ಮೊಗಲಿಶೆಟ್ಟರ, ಬಿಜೆಪಿ ವಕ್ತಾರ ರವಿ ನಾಯಕ, ಮುಕುಂದ ಗುಗ್ಗರಿ, ರಘು ಧಾರವಾಡಕರ, ಮೋಹನ ಬಡಿಗೇರ, ಕೃಷ್ಣಾ ಪಾಸ್ತೆ, ವೀರೇಶ ಸೊಟನಾಳ, ನಾಗರಾಜ ಕರಗುದರಿ, ಹನಮಂತ ಜಾಲಗಾರ, ಇತರರು ಇದ್ದರು.