ಜೈನಮುನಿ ಅವರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಲು ಶಾಸಕ ಅಭಯ್ ಪಾಟೀಲ ಒತ್ತಾಯ

IMG20230709110553.jpg
Published on

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಬಹಿರೇಕೋಡಿಯ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಒತ್ತಾಯಿಸಿದರು.
 ನಗರದ ಗೋಮಟೇಶ ವಿದ್ಯಾಪೀಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆ ಅನುಮಾನ ಮೂಡಿಸುವಂತಿದೆ. ಕಾಮಕುಮಾರ ನಂದಿ ಮಹಾರಾಜರು ಹಣದ ವ್ಯವಹಾರ ಮಾಡಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಜೈನ ಸಮುದಾಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಸಿಬಿಐ ಮೂಲಕ ಪಾರದರ್ಶಕವಾಗಿ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದರು.
 ಮುನಿಗಳ ಕೊಲೆ ಪ್ರಕರಣದಲ್ಲಿ ಭಾಗಿಯಾದ ಒಬ್ಬ ಆರೋಪಿ ಹೆಸರು ಬಹಿರಂಗಪಡಿಸಲಾಗಿದೆ. ಇನ್ನೊಬ್ಬ ಆರೋಪಿ ಅನ್ಯಧರ್ಮಕ್ಕೆ ಸೇರಿದ್ದು, ಅವನ ಹೆಸರು ಬಹಿರಂಗಪಡಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಸ್ವಾಮೀಜಿ ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಹೇಳಲು ಅವರು ಹಿಂಜರಿಯುತ್ತಿಲ್ಲ. ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಂದು ಧರ್ಮದ ತುಷ್ಟಿಕರಣ ನಡೆಯುತ್ತಿದೆ ಎಂದು ಆರೋಪಿಸಿದರು.
 ಜೈನ ಸಮುದಾಯದ ಯಾವುದೇ ಮುನಿಗಳು ಎಂದಿಗೂ ಹಣ ಮುಟ್ಟುವುದಿಲ್ಲ ಮತ್ತು ಹಣಕಾಸಿನ ವ್ಯವಹಾರ ಮಾಡುವುದಿಲ್ಲ. ಆಶ್ರಮದ ಟ್ರಸ್ಟಿಗಳು ಅದನ್ನು ನಿರ್ವಹಿಸುತ್ತಾರೆ. ಆದರೆ, ಮುನಿಗಳ ಕುರಿತಾಗಿ ನಿರ್ದಿಷ್ಟವಾದ ಹೇಳಿಕೆ ನೀಡುವಂತೆ ಸ್ಥಳೀಯರಿಗೆ ಪೊಲೀಸರು ಒತ್ತಡ ಹಾಕುತ್ತಿರುವ ನಡೆ ಸರಿಯಲ್ಲ. ಸದನದಲ್ಲಿ ಸೋಮವಾರ ಈ ಬಗ್ಗೆ ಧ್ವನಿ ಎತ್ತುವೆ ಎಂದು ತಿಳಿಸಿದರು.
 ವಾಸ್ತವವಾಗಿ ಹಿರೇಕೋಡಿಯ ಆಶ್ರಮದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಟ್ಟಡ ಸಾಮಗ್ರಿಗಳ ಖರೀದಿಗೆ ಹಣ ಕೊಡಲಾಗಿತ್ತು. ಆದರೆ, ಹಣ ಪಡೆದವರು ಸಾಮಗ್ರಿಗಳನ್ನು ಕೊಟ್ಟಿರಲಿಲ್ಲ. ಹಣವನ್ನೂ ಮರಳಿ ನೀಡಿರಲಿಲ್ಲ. ಇದನ್ನು ಆಶ್ರಮದ ಟ್ರಸ್ಟ್‌ನವರು ಹಣ ಮರಳಿಸುವಂತೆ ತಿಳಿಸಿದ್ದರು. ಈ ವಿಷಯ ಮುನಿಗಳ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮುನಿಗಳೂ ಅಸಮಾಧಾನಗೊಂಡು ಸಾಮಗ್ರಿ ಪೂರೈಸುವುದಾಗಿ ಹಣ ಪಡೆದವರನ್ನು ಈ ಬಗ್ಗೆ ಕೇಳಿದ್ದರು. ಇದು ಮುನಿಗಳ ಹತ್ಯೆಗೆ ಕಾರಣವಾಗಿರಬಹುದೇ ಹೊರತು, ಅವರೇ ಸ್ವತಃ ಹಣಕಾಸಿನ ವ್ಯವಹಾರ ಮಾಡಿಲ್ಲ ಎಂದು ತಿಳಿಸಿದರು.
 ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಈ ಕೊಲೆ ಪ್ರಕರಣದ ತನಿಖೆಯನ್ನು ಸರಿಯಾದ ರೀತಿಯಲ್ಲಿ ಮಾಡುತ್ತೇವೆ. ಯಾರೂ ಪ್ರತಿಭಟನೆ ಮಾಡಬೇಡಿ ಎಂದು ಪೊಲೀಸರು ಕೇಳಿಕೊಂಡಿದ್ದರು. ಆದರೆ, ಈಗ ಸಮಾಜದ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net