ಬಿಜೆಪಿ ತನ್ನ ನಿಲುವು ಸ್ಪಷ್ಟ ಪಡಿಸಲಿ

abbayya
Published on

ಹುಬ್ಬಳ್ಳಿ: ಬಿಜೆಪಿಗರು ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನು ದೂಷಿಸುತ್ತಾರೆ. ಇನ್ನೊಂದು ಕಡೆ ಇದೇ ಗ್ಯಾರಂಟಿಗಳ ಜಾರಿಗೆ ಆಗ್ರಹಿಸಿ ಪ್ರತಿಭಟಿಸುತ್ತಾರೆ. ಹೀಗೆ ಗೊಂದಲ ಸೃಷ್ಟಿಸುವ ಬದಲು ಅವರು ಗ್ಯಾರಂಟಿ ಪರವೋ ಅಥವಾ ವಿರೋಧಿಗಳೋ ಎಂಬುವುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಸದನದಲ್ಲಿ ಆಗ್ರಹಿಸಿದರು.

ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಅವರು, ತರಾತುರಿಯಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಸಮರ್ಪಕ ಅನುದಾನ ಇರಿಸಿಲ್ಲ. ಎನ್​ಇಪಿ ಮೂಲಕ ಇತಿಹಾಸ ತಿರಚುವ, ಗುರುಕುಲ ಪದ್ಧತಿ ಮರಳಿ ಜಾರಿ ಮಾಡುವ ಹುನ್ನಾರ ಇತ್ತೇನೋ ಗೊತ್ತಿಲ್ಲ. ಆದರೆ, ಎನ್​ಇಪಿ ಅನುಷ್ಠಾನಕ್ಕೆ ಕೇಂದ್ರ ಆಗಲಿ, ರಾಜ್ಯದಿಂದಾಗಲಿ ಅನುದಾನವನ್ನೆ ನೀಡಿರಲಿಲ್ಲ ಎಂದರು.

2014ರಿಂದ 2018ರವರೆಗೆ ಸಿದ್ದರಾಮಯ್ಯ ಸರ್ಕಾರ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ 13.15 ಕೋಟಿ ರೂ. ಅನುದಾನ ನೀಡಿದ್ದರೆ, ಹಿಂದಿನ ಬಿಜೆಪಿ ಸರ್ಕಾರ ಕೇವಲ 75ಲಕ್ಷ ರೂ. ಅನುದಾನ ನೀಡಿದೆ. ಇಂದು ವೇತನ ನೀಡಲು ಸಹ ದುಡ್ಡಿಲ್ಲದಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ 8 ಹೊಸ ವಿಶ್ವವಿದ್ಯಾಲಯಗಳನ್ನು ಘೊಷಣೆ ಮಾಡಿ ಕೇವಲ 2 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದರಿಂದ ವಿವಿಗಳು ಗೊಂದಲದಲ್ಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಿಸಿಲ್ಲ. ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿದರೂ ಲ್ಯಾಪ್​ಟಾಪ್ ವಿತರಿಸಲಾಗಿಲ್ಲ. ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 34 ಸಾವಿರ ಕೋಟಿ ರೂ. ಅನುದಾನ ಮಿಸಲಿಟ್ಟಿದ್ದು, ಎಲ್ಲ ಸಮಸ್ಯೆ ಬಗೆ ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net