

ಅವಿರೋಧ ಆಯ್ಕೆ ಖಚಿತ: ವಿಶ್ವಾಸ ವೈದ್ಯ
ಬೆಳಗಾವಿ: ನಮ್ಮ ಯರಗಟ್ಟಿ ಕ್ಷೇತ್ರದಲ್ಲಿ ಈವರೆಗೆ ಯಾರೂ ಬೇರೆಯವರು ನಾಮಪತ್ರ ಸಲ್ಲಿಸಿಲ್ಲ. ಬಹುತೇಕ ನನ್ನದು ಅವಿರೋಧ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಬಿಡಿಸಿಸಿ ಬ್ಯಾಂಕ್ ಯರಗಟ್ಟಿ ತಾಲೂಕು ಕ್ಷೇತ್ರದ ಅಭ್ಯರ್ಥಿ, ಶಾಸಕ ವಿಶ್ವಾಸ ವೈದ್ಯ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಕಾರ್ಯಕರ್ತರೊಂದಿಗೆ ಶನಿವಾರ ಇಲ್ಲಿನ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿ ಎರಡನೇ ಸೆಟ್ ನಾಮ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹುತೇಕ ಅವಿರೋಧ ಆಯ್ಕೆ ಖಚಿತವಾಗುತ್ತಿದೆ. 3 ಗಂಟೆಯವರೆಗೆ ಕಾದು ನೋಡೋಣ. ನನ್ನದು ಮಾತ್ರವಲ್ಲ ಬೆಳಗಾವಿ ಕ್ಷೇತ್ರದ ರಾಹುಲ ಜಾರಕಿಹೊಳಿ ಸೇರಿದಂತೆ ನಮ್ಮ ಬಣದ 7-8 ಜನರ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗುವುದು ಗ್ಯಾರಂಟಿ ಇದೆ. ಕಾದು ನೋಡಿ ಎಂದರು.
ನನಗೆ ಡಿಸಿಸಿ ಬ್ಯಾಂಕ್ ಕ್ಷೇತ್ರ ಹೊಸದು. ನಾನಾಗಿಯೇ ಸ್ಪರ್ಧೆ ಮಾಡಿದವನಲ್ಲ. ನಮ್ಮ ಯರಗಟ್ಟಿ ತಾಲೂಕಿನ 34 ಸೊಸೈಟಿಗಳವರು ಮತ್ತು ಕಾರ್ಯಕರ್ತರ ಅಪೇಕ್ಷೆ ಮೇರೆಗೆ ನಾನು ಅಭ್ಯರ್ಥಿಯಾಗಿದ್ದೇನೆ. ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಸೊಸೈಟಿಗಳ ಸಭೆ ಮಾಡಿದ್ದೇವು. ಆಗ ಯಾರಾದರೂ ಅಭ್ಯರ್ಥಿಯಾಗಿ ಬೆಂಬಲ ಕೊಡುವೆ ಎಂದಿದ್ದೆ. ಆದರೆ ಎಲ್ಲರೂ ನೀವೆ ಅಭ್ಯರ್ಥಿಯಾಗಬೇಕು ಎಂದು ಒತ್ತಡ ಹಾಕಿದರು. ಅವರೇ ನನ್ನ ಸೊಸೈಟಿಗೆ ಸದಸ್ಯನನ್ನಾಗಿಸಿ, ನಿರ್ದೇಶನನ್ನಾಗಿ ಮಾಡಿ, ಈಗ ಡಿಸಿಸಿ ಬ್ಯಾಂಕ್ ಸ್ಪರ್ಧಿಸುವಂತೆ ಮಾಡಿದ್ದಾರೆ ಎಂದರು.
ಮೊದಲ ಸಲ ನಾನು ಡಿಸಿಸಿ ಬ್ಯಾಂಕ್ ಪ್ರವೇಶಿಸುತ್ತಿದ್ದೇನೆ. ನನಗೂ ಬಹಳ ಕುತೂಹಲವಿದೆ. ನನಗೆ ಇದು ಹೊಸದು. ಎಲ್ಲವನ್ನೂ ಕಲಿತುಕೊಂಡು ಕೆಲಸ ಮಾಡುವೆ. ರೈತರಿಗೆ ಬರುವ ಸೌಲಭ್ಯ ಪ್ರಾಮಾಣಿಕವಾಗಿ ಒದಗಿಸಿಕೊಡುವೆ. ನಮ್ಮ ತಾಲೂಕಿನಲ್ಲಿ ಅನೇಕ ಕಡೆ ಪಿಕೆಪಿಎಸ್ ಸಂಘಗಳಿಲ್ಲ. ಸಂಘಗಳ ಸಂಖ್ಯೆ ಹೆಚ್ಚಿಸುವ ಜತೆಗೆ ಸದಸ್ಯರಿಗೆ ಅನುಕೂಲಕರವಾದ ಕೆಲಸಗಳನ್ನು ಮಾಡಲು ಕಟಿಬದ್ಧನಾಗಿರುವೆ ಎಂದು ಹೇಳಿದರು.