ಗ್ರಾಮಗಳ ಸರ್ವತೋಮುಖ ಪ್ರಗತಿಗೆ ಬದ್ಧ

3 KRN-1 MLA Honour
Published on

ಕೆ.ಆರ್.ನಗರ : ಗ್ರಾಮಗಳ ಸರ್ವತೋಮುಖ ಪ್ರಗತಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ತಾಲೂಕಿನ ಬಡಕನಕೊಪ್ಪಲು ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿಕಾಸ ಗ್ರಾಮ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ಹಣ ಬಿಡುಗಡೆ ಮಾಡಿಸಲಾಗಿದೆ. ಬಡಕನಕೊಪ್ಪಲು ಗ್ರಾಮಕ್ಕೆ ಈ ಹಿಂದೆ ವಿಕಾಸ ಗ್ರಾಮ ಯೋಜನೆಯಡಿ 75 ಲಕ್ಷ ರೂ. ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಿ ಕ್ರಿಯಾಯೋಜನೆ ರೂಪಿಸಲಾಗಿತ್ತು. ಆದರೆ ಅನುಮೋದನೆ ದೊರಕದ ಕಾರಣ ಕಾಮಗಾರಿ ನಡೆದಿರಲಿಲ್ಲ. ಇದೀಗ ಅನುದಾನ ಕೊಡಿಸಲಾಗಿದ್ದು, ನಿಗದಿತ ಕಾಮಗಾರಿಗೆ ಜೀವ ಬಂದಿದೆ ಎಂದರು. ಬಿಂದು ಗ್ರಾಮದ ಎಲ್ಲ ರಸ್ತೆಗಳೂ ಸೇರಿದಂತೆ ಸಮುದಾಯ ಭವನ, ಚರಂಡಿ, ಶಾಲಾ ಕಟ್ಟಡ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ತಾಳ್ಮೆಯಿಂದ ಕೆಲಸಗಳನ್ನು ವೀಕ್ಷಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ರಾಜ್ಯ ಹೆದ್ದಾರಿ ಸೇರಿದಂತೆ ಕ್ಷೇತ್ರದ ಎಲ್ಲ ರಸ್ತೆಗಳಲ್ಲೂ ಇರುವ ಗುಂಡಿ ಮುಚ್ಚಲು ಸಿಎಂ ಅನುದಾನ ಒದಗಿಸಿದ್ದಾರೆ. ಮಳೆ ನಿಂತ ಮೇಲೆ ರಸ್ತೆಗಳ ರಿಪೇರಿ ನಡೆಯಲಿದೆ ಎಂದು ತಿಳಿಸಿದರು.

*

ಹೆಚ್ಚುವರಿ ಬಸ್ ನೀಡಲು ಸಚಿವ ಭರವಸೆ

ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿಗೆ ಹೆಚ್ಚುವರಿ ಬಸ್‌ಗಳನ್ನು ನೀಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದೇನೆ. ಕೆ.ಆರ್.ನಗರ ಬಸ್ ಘಟಕಕ್ಕೆ 25 ನೂತನ ಬಸ್ ನೀಡಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ದಸರಾ ಸಂದರ್ಭದಲ್ಲಿ ಜನರ ಸೇವೆಗೆ ಸಮರ್ಪಣೆಯಾಗಲಿವೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಬಡಕನಕೊಪ್ಪಲು ಗ್ರಾಮವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುವುದು. ಗುಣಮಟ್ಟದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಗ್ರಾಮಸ್ಥರೂ ಕಾಮಗಾರಿ ಮೇಲೆ ಕಣ್ಣಿಡಬೇಕು ಎಂದರು. ಇದೇ ಸಂದರ್ಭ ಬಡಕನಕೊಪ್ಪಲು ಗ್ರಾಮಸ್ಥರು ಶಾಸಕ.ಡಿ.ರವಿಶಂಕರ್ ಅವರನ್ನು ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು.

ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ, ತಾಪಂ ಇಒ ಕುಲದೀಪ್, ಜಿಪಂ ಎಇಇ ವಿನುತ್, ಜೆಇ ಗಳಾದ ಕಿರಣ್, ರವಿಕುಮಾರ್, ಚೆಸ್ಕಾಂ ಎಇಇ ಅರ್ಕೇಶ್ವರ ಮೂರ್ತಿ, ಪಿಡಿಒ ಅಶ್ವಿನಿ, ರಾಜಸ್ವ ನಿರೀಕ್ಷಕ ಪ್ರಕಾಶ್, ಗ್ರಾಪಂ ಅಧ್ಯಕ್ಷೆ ವಿದ್ಯಾ, ಉಪಾಧ್ಯಕ್ಷ ಬಿ.ಎನ್.ರೇವಣ್ಣ, ಹಂಪಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಶಾಂತ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಟಿಎಪಿಎಂಎಸ್ ಮಾಜಿ ನಿರ್ದೆಶಕ ಡಿ.ಸಿ.ರವಿ, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವ, ಸದಸ್ಯ ಎಂ.ಟಿ.ರಾಜೇಶ್, ರಮ್ಯಾ ಮಂಜುನಾಥ್, ಹರಿರಾಜ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net