ಗ್ರಾಮಸ್ಥರ ಸಮಸ್ಯೆ ಆಲಿಸಿದ ಡಾ. ಮಂತರ್ ಗೌಡ

mla
Published on

ಮಡಿಕೇರಿ:

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಂಗಳವಾರ ಸಂಜೆ ಗಾಳಿಬೀಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಲೂರು ಗ್ರಾಮಕ್ಕೆ ಅಧಿಕಾರಿಗಳ ಜತೆ ತೆರಳಿ ಗ್ರಾಮಸ್ಥರ ಅಹವಾಲು ಆಲಿಸಿದರು. ಗ್ರಾಮಸ್ಥರ ಕೋರಿಕೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಡಾ. ಮಂತರ್ ಗೌಡ ತಮ್ಮ ಜತೆ ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು, ಸೆಸ್ಕ್, ಹಾಗೂ ತಾಲೂಕು ಪಂಚಾಯತ್ ಇ.ಒ. ಅವರನ್ನು ಕರೆದೊಯ್ದಿದ್ದರು.

ಸುಮಾರು 2 ಗಂಟೆಗಳ ಕಾಲ ಜನ ಸ್ಪಂದನ ಸಭೆಯ ರೀತಿಯಲ್ಲಿಯೇ ಸಭೆ ನಡೆಸಿ ವಸ್ತು ಸ್ಥಿತಿಯ ವಿವರ ಪಡೆದರು. ಆಡಳಿತ ವ್ಯವಸ್ಥೆಯೇ ಶಾಸಕರೊಂದಿಗೆ ತಮ್ಮ ಬಳಿ ಬಂದಿದ್ದನ್ನು ಕಂಡು ಪುಳಕಿತರಾದ ಗ್ರಾಮದ ಜನತೆ ತಮ್ಮ ಬಹುಕಾಲದ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಹದಿನೈದು ವರ್ಷಗಳಿಂದ ಕಾಮಗಾರಿ ಆರಂಭಗೊAಡು ಪೂರ್ಣಗೊಳ್ಳದ ಸೇತುವೆ, ದಶಕಗಳ ಕಾಲದಿಂದ ಹದಗೆಟ್ಟಿರುವ ರಸ್ತೆಗಳು, ವಿಪುಲವಾಗಿ

ಜಲಮೂಲ ಇದ್ದರೂ ಕುಡಿಯುವ ನೀರಿಗೆ ಪರದಾಟ, ರಸ್ತೆ ಬದಿಯಲ್ಲಿ ಬಾಗಿ ನಿಂತು ಭೂ ಸ್ಪರ್ಶಕ್ಕೆ ಸಿದ್ದವಾಗಿರುವ ವಿದ್ಯುತ್ ಕಂಬಗಳು, ಪ್ರತಿನಿತ್ಯ ವೋಲ್ಟೇಜ್ ಸಮಸ್ಯೆಗಳು, ಭಾನುವಾರ ಮತ್ತು ರಜಾ ದಿನಗಳಲ್ಲಿ ಬಸ್ ಬಾರದೇ ಇರುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.

ಗ್ರಾಮಸ್ಥರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಬಹುಮಟ್ಟಿಗೆ ಬಗೆಹರಿಸಲು ಕ್ರಮ ಕೈಗೊಂಡರು.

ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಕರೆ ಮಾಡಿ ಈ ಭಾನವಾರದಿಂದಲೇ ಬಸ್ ಸಂಚಾರಕ್ಕೆ ನಿರ್ದೇಶನ ನೀಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರಿಗೆ ಹದಿನೈದು ದಿನಗಳಲ್ಲಿ ನೀರಿನ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದರು. ಕೂಟು ಹೊಳೆಯಿಂದ ಗಾಳಿಬೀಡು ರಸ್ತೆ ಮರು ನಿರ್ಮಾಣಕ್ಕೆ ಮೂರು ಕೋಟಿ ರೂ. ಹಣ ನೀಡಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು.

ದೇವಸ್ತೂರು-ಕಾಲೂರು-ಬಾರಿಬೆಳ್ಳಚ್ಚು ಮೂಲಕ ಮಾಂದಲಪಟ್ಟಿಗೆ ಹೋಗುವ ಪಿ.ಡಬ್ಲ್ಯೂ.ಡಿ ರಸ್ತೆಯ ಅಂದಾಜು ಪಟ್ಟಿ ಸಲ್ಲಿಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೂರು ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ಅನ್ನು ಗ್ರಾಮದ ವಿವಿಧ ಭಾಗಗಳಲ್ಲಿ ಅಳವಡಿಸಲು ಸೆಸ್ಕ್ ಅಧಿಕಾರಿಗಳಿಗೆ ಆದೇಶ ನೀಡಿದರು.

ಕಾಲೂರು ಶಾಲೆಯಿಂದ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಪಂಚಾಯತ್ ರಾಜ್ ಎಂಜಿನಿಯರ್‌ಗೆ ಸೂಚನೆ ನೀಡಿದರು.

ನಂತರ ಮಾತನಾಡಿದ ಡಾ ಮಂತರ್ ಗೌಡ ತಮ್ಮ ಕ್ಷೇತ್ರದ ಎಲ್ಲಾ ಗ್ರಾಮಗಳು ಕುಗ್ರಾಮ ಎಂಬ ಹಣೆಪಟ್ಟಿ ಕಳಚಿ ಸುಗ್ರಾಮಗಳಾಗಿ ಬದಲಾಗಬೇಕು ಎಂಬುದು ತಮ್ಮ ಹೆಬ್ಬಯಕೆಯಾಗಿದ್ದು ಅದನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಪಡುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಪ್ರಮುಖರಾದ ಹೆಚ್.ಎ. ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಅಯಿಲಪಂಡ ಪುಷ್ಪ ಪೂಣಚ್ಚ, ಪ್ರಮುಖರಾದ ಕೋಚನ ಹರಿಪ್ರಸಾದ್, ವಿ.ಜಿ. ಮೋಹನ್, ರೋಶನ್ ಗಣಪತಿ, ಪೊನ್ನಪ್ಪ,

ತಿಮ್ಮಯ್ಯ, ಪವನ್, ಸಾಗರ್, ಕವನ್, ಶರಣ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net