ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸಹಕಾರ

MLA 1
Published on

ಹನೂರು : ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.ತಾಲೂಕಿನ ಮ. ಬೆಟ್ಟದ ನಾಗಮಲೆ ಭವನದ ಆವರಣದಲ್ಲಿ ಶನಿವಾರ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ಸರ್ಕಾರಿ ನೌಕರರು ಒತ್ತಡದ ನಡುವೆಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಹಲವು ವರ್ಷಗಳಿಂದಲೂ ಕೆಲವು ಬೇಡಿಕೆಗಳನ್ನು, ಅದರಲ್ಲೂ 7ನೇ ವೇತನ ಆಯೋಗ ಜಾರಿ, ಎನ್‌ಪಿಎಸ್ ಹಾಗೂ ಉಚಿತ ಆರೋಗ್ಯ ಸೇವೆಯನ್ನು ಸರ್ಕಾರ ಜಾರಿ ಮಾಡಿಲ್ಲ. ಈ ಬಗ್ಗೆ ನೌಕರರು ಒತ್ತಾಯಿಸುತ್ತಿರುವುದು ಗಮನದಲ್ಲಿದೆ. ಈ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಲಾಗಿದ್ದು, ಜಾರಿ ಮಾಡುವಂತೆ ಒತ್ತಾಯ ಮಾಡಲಾಗಿದೆ. ಹಾಗಾಗಿ ನೌಕರರ ಬೇಡಿಕೆಗಳ ಈಡೇರಿಕೆಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಮೆಚ್ಚುಗೆಯ ಸಂಗತಿ : ಚಾಮರಾಜನಗರ ಜಿಲ್ಲೆ ಜನಪದ ಕಲೆಗಳ ತವರೂರು. ಹಾಗಾಗಿ ತನ್ನದೇಯಾದ ವಿಶೇಷತೆ ಹೊಂದಿದೆ. ಅದರಲ್ಲೂ ಗಡಿ ಅಂಚಿನಲ್ಲಿರುವ ಹನೂರು ಭಾಗವೂ ಜಿಲ್ಲೆಯಲ್ಲಿ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ಭೌಗೋಳಿಕವಾಗಿ ಶೇಕಡ 70ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವುದರ ಮೂಲಕ ಸಮೃದ್ಧಿಯಿಂದ ಕೂಡಿದೆ. ಹಾಗಾಗಿ ಗಡಿನಾಡು ಕನ್ನಡ ಉತ್ಸವವನ್ನು ಮ. ಬೆಟ್ಟದಲ್ಲಿ ಆಯೋಜಿಸಿರುವುದು ಮೆಚ್ಚುಗೆಯ ಸಂಗತಿ. ಇದರಿಂದ ಗಡಿ ಭಾಗದಲ್ಲಿ ಭಾಷಾ ಬೆಳವಣಿಗೆಯ ಉತ್ತೇಜನಕ್ಕೆ ಸಹಕಾರಿಯಾಗಿದೆ ಎಂದರು. ಸರ್ಕಾರಿ ನೌಕರರ ಸಂಘದ ವಿವಿಧ ಜಿಲ್ಲೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net