ಕರೊನಾ ಕಟ್ಟಿಹಾಕುವಲ್ಲಿ ಸುಧಾರಣೆ ; ಶಾಸಕ ಬಿ.ಸಿ.ನಾಗೇಶ್ ವಿಶ್ವಾಸ ; ಆರ್‌ಟಿಪಿಸಿಆರ್ ಪರೀಕ್ಷಾ ವರದಿ ವಿಳಂಬ

11 TPT 2
Published on

ತಿಪಟೂರು : ಕರೊನಾ ಎರಡನೇ ಅಲೆಯನ್ನು ಕಟ್ಟಿಹಾಕುವ ಪ್ರಯತ್ನದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಶಾಸಕ ಬಿ.ಸಿ.ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಇಲ್ಲಿವರೆಗೂ 28,586 ಡೋಸ್ ಮೊದಲನೇ ಲಸಿಕೆ, ಮತ್ತು ಮೇ 9 ರವರೆಗೆ 8,588 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು, ಲಸಿಕಾ ಅಭಿಯಾನದಲ್ಲಿ ತಾಲೂಕು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಮಂಗಳವಾರವೂ ಮೊದಲನೇ ಡೋಸ್ ಪಡೆದವರಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗುತ್ತಿದೆ, ಸ್ಲಾಟ್ ಬುಕ್ ಮಾಡುವ ಸಲುವಾಗಿ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಸ್ಲಾಟ್ ನೋಂದಣಿ ಮಾಡಲು ಏಕ ಕಾಲದಲ್ಲಿ ಆನ್‌ಲೈನ್ ನೋಂದಣಿಗೆ ಚಾಲನೆ ನೀಡಲಾಗಿದ್ದು, ಆನ್‌ಲೈನ್ ಪ್ರಾರಂಭಗೊಂಡಿದೆ. ಮೇ 17ರವರೆಗೂ ಮೊದಲನೇ ಡೋಸ್ ಪಡೆಯುವವರು ನೋಂದಣಿ ಮಾಡಿದ್ದಾರೆ ಎಂದು ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ವಾರದಲ್ಲಿ 75 ರಿಂದ 80 ಸಾವಿರ ನೋಂದಣಿ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಮೊಬೈಲ್ ಬಳಕೆ ಬಾರದವರಿಗೆ ನೆರವಾಗಲು ಆಯಾ ಗ್ರಾಮಗಳ ಪಿಡಿಒ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮದ ಯುವಕರ ಪಡೆ ಬಳಸಿಕೊಳ್ಳಲಾಗುವುದು, ನಗರದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ನೆರವಾಗುವಂತೆ ಸೂಚಿಸಲಾಗಿದೆ. 42 ದಿನ ಪೂರೈಸಿದವರಿಗೆ ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆ ಮೇ 12 ರಿಂದ 14ರವರೆಗೆ ಜಾರಿಯಲ್ಲಿರಲಿದೆ. ಈ ಸಂಬಂಧ ಪ್ರತಿ ದಿನ ಸಂಜೆ ಲಭ್ಯವಿರುವ ಲಸಿಕಾ ವಿವರಗಳನ್ನು ಮೊಬೈಲ್ ಸಂದೇಶದ ಮೂಲಕ ಕಳಿಸಲಾಗುತ್ತಿದೆ, ಲಸಿಕೆ ಪೂರೈಸಲು ಡಿಎಚ್‌ಒಗೆ ಮನವಿ ಮಾಡಲಾಗಿದೆ ಎಂದರು.

ಕೋವಿಡ್ ಕೇರ್ ಸೆಂಟರ್‌ನಲ್ಲಿ ಅತ್ಯುತ್ತಮ ವ್ಯವಸ್ಥೆ ಇದ್ದು, ದಿನದ 24 ಗಂಟೆ ವೈದ್ಯ ಸಿಬ್ಬಂದಿ ಇರುತ್ತಾರೆ. ಇಲ್ಲಿ ಪ್ರತಿನಿತ್ಯ ಪ್ರಾಣಯಾಮ, ಯೋಗಾಸನದ ಜತೆಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ 14 ಗ್ರಾಮಗಳಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸಲಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

ಆರ್‌ಟಿಪಿಸಿಆರ್ ಪರೀಕ್ಷಾ ವರದಿ ವಿಳಂಬ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಮೂವರು ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ಮತ್ತು ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಿದ್ದರಿಂದ ವರದಿ ವಿಳಂಬವಾಗಿದೆ. ಹೆಚ್ಚುವರಿ ಘಟಕಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ, ಇದು ಲಭ್ಯವಾದರೆ ಕೇವಲ 24 ಗಂಟೆಯ ಒಳಗೆ ಪರೀಕ್ಷಾ ವರದಿ ಸಿಗಲಿದೆ ಎಂದರು. ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್, ನಗರಾಯುಕ್ತ ಉಮಾಕಾಂತ್, ಟಿಎಚ್‌ಒ ಎನ್.ಎಸ್.ರವಿಕುಮಾರ್ ಇದ್ದರು.

ಲಸಿಕೆಗೆ ಕೊರತೆ ಇಲ್ಲ: ಕೋವಿಡ್ ಲಸಿಕೆ ಕೊರತೆ ಎಂಬುದು ಸುಳ್ಳು, ಕೇಂದ್ರ ಸರ್ಕಾರ ಮೊದಲೇ ಯೋಚಿಸಿದಂತೆ 60, 45 ವರ್ಷ ಮೇಲ್ಪಟ್ಟವರು ಹಾಗೂ 18 ವರ್ಷ ತುಂಬಿದವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಯೋಜಿಸಿತ್ತು, ಆದರೆ ಆರಂಭದ ದಿನಗಳಲ್ಲಿ ವಿರೋಧ ಪಕ್ಷದವರು ಜನರಲ್ಲಿ ಭೀತಿ ಹುಟ್ಟಿಸಿದ ಪರಿಣಾಮ ಲಸಿಕೆ ಪಡೆಯಲು ಮುಂದಾಗಲಿಲ್ಲ, ಏಪ್ರಿಲ್‌ನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡುತ್ತೇವೆಂದರೂ ಹೆಚ್ಚು ಗಮನ ಕೊಡಲಿಲ್ಲ. ಈಗ ಎಲ್ಲ ವರ್ಗದವರು ನಾಮುಂದು, ತಾಮುಂದು ಎಂಬಂತೆ ಲಸಿಕೆ ಪಡೆಯಲು ಮುಂದಾಗಿದ್ದೆ ವಿಳಂಬಕ್ಕೆ ಕಾರಣವಾಗಿದೆ. ಪ್ರಾರಂಭದ ದಿನಗಳಲ್ಲಿ ಜನ ತಾಳ್ಮೆ ವಹಿಸಿ ಲಸಿಕೆ ಪಡೆದಿದ್ದರೆ ಲಸಿಕೆ ಕೊರತೆ ಉಂಟಾಗುತ್ತಿರಲಿಲ್ಲ ಎಂದು ಬಿ.ಸಿ.ನಾಗೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net