

ಕೋಲಾರ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲೆಯವರೇ ಆದ ಜೆಡಿಎಸ್ ಅಭ್ಯರ್ಥಿ ಆರ್. ಚೌಡರೆಡ್ಡಿ ಅವರನ್ನು ಮತದಾರರು ಗೆಲ್ಲಿಸಿದರೆ ಪದವೀಧರರ ಸಮಸ್ಯೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಹೆಚ್ಚು ಬಲ ಬರುತ್ತದೆ ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿದರು.
ನಗರದ ಕಚೇರಿಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಮೈತ್ರಿ ಸರ್ಕಾರದಲ್ಲಿ ಎಮ್ಮೆಲ್ಸಿ ಚೌಡರೆಡ್ಡಿ ಜತೆಗೆ ಸಿಎಂ ಕುಮಾರಸ್ವಾಮಿ ಅವರನ್ನು ನಾನು ಭೇಟಿಯಾಗಿ ಕೋಲಾರದ ಅಭಿವೃದ್ಧಿಗೆ ಹಲವು ವಿಚಾರ ಮುಂದಿಟ್ಟಿದ್ದೆ. ನಗರದ ಮಾಲೂರು ಬೈಪಾಸ್‌ನಿಂದ ಎಂಬಿ ರಸ್ತೆ ಸೇರಿ ನಗರದ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಮಂಜೂರು ಮಾಡಿದ್ದರು. ಆ ಅನುದಾನದಿಂದಲೇ ಕಾಮಗಾರಿ ನಡೆಯುತ್ತಿದೆ ಎಂದರು.
ಪರಿಷತ್ ಸದಸ್ಯರಾದ ನಂತರ ಸದನದಲ್ಲಿ ಸಿಕ್ಕ ಮೊದಲ ಅವಕಾಶದಲ್ಲಿ ನಗರದ ಅಭಿವೃದ್ಧಿ, ವರ್ತುಲ ರಸ್ತೆ ಅವಶ್ಯಕತೆ ಕುರಿತು ಗಮನ ಸೆಳೆದಿದ್ದೇನೆ. ಅ.28ರಂದು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿ ಆರ್. ಚೌಡರೆಡ್ಡಿ ಅವರನ್ನು ಮತದಾರರು ಗೆಲ್ಲಿಸಿಕೊಟ್ಟರೆ ಪದವೀಧರರ ಸಮಸ್ಯೆ, ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಹೆಚ್ಚು ಬಲ ಬರುತ್ತದೆ ಎಂದರು.
ಸಂಘಟನೆ ಸಾಲದು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಗುಂಪುಗಳಿವೆ. ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಸಾಲದೆಂಬ ಕಾರಣಕ್ಕೆ ಸಂಘಟಿಸಲು ವರಿಷ್ಠರು ಸೂಚಿಸಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು ಎಂದರು. ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ ಪಕ್ಷ ಸಂಘಟಿಸುತ್ತಿದ್ದಾರೆ. ಮುಂಬರುವ ಶುಕ್ರವಾರ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದು ನುಡಿದರು.
ಜಿಪಂ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ ಮಾತನಾಡಿ, ವಿಧಾನ ಪರಿಷತ್ ಸದಸ್ಯರಾಗಿ ಚೌಡರೆಡ್ಡಿ ಕಳೆದ 6 ವರ್ಷದ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ ಶಿಕ್ಷಕರು, ಪದವೀಧರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬಸವರಾಜ ಹೊರಟ್ಟಿ ಜತೆಗೆ ಎಲ್ಲ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಎಲ್ಲ 5 ಜಿಲ್ಲೆಗಳಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿರುವುದರಿಂದ ಗೆಲ್ಲುವ ಅವಕಾಶ ಹೆಚ್ಚಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ, ಜೆಡಿಎಸ್ ಮುಖಂಡರಾದ ಬಣಕನಹಳ್ಳಿ ನಟರಾಜ್,ಮೂರಾಂಡಹಳ್ಳಿ ಗೋಪಾಲ್,ವಕ್ಕಲೇರಿ ರಾಜು, ಸಿಎಂಆರ್ ಶ್ರೀನಾಥ್, ನಂಜುಂಡಗೌಡ ಗೋಷ್ಠಿಯಲ್ಲಿ ಹಾಜರಿದ್ದರು.