

ದೊಡ್ಡಬಳ್ಳಾಪುರ: ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಕೊಟ್ಟಿಗೆ ಮಾಚೇನಹಳ್ಳಿ ದತ್ತು ಗ್ರಾಮದಲ್ಲಿ ನೂತನ ತಾಂತ್ರಿಕ ತರಬೇತಿ ಕಾರ್ಯಕ್ರಮದಡಿ ರೈತ ಫಲಾನುಭವಿಗಳಿಗೆ ಎಂ.ಎಲ್-365 ರಾಗಿ ತಳಿ ಹಾಗೂ ಬಿ.ಆರ್.ಜಿ-5 ತೊಗರಿ ಬಿತ್ತನೆ ಬೀಜ ವಿತರಿಸಲಾಯಿತು.
ಖುಷ್ಕಿ ಪ್ರದೇಶದಲ್ಲಿ ಪ್ರಮುಖ ಬೆಳೆಯಾದ ರಾಗಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಮುಂಗಾರಿಗೆ ಸೂಕ್ತ ಎಂ.ಎಲ್-365 ರಾಗಿ ತಳಿಯನ್ನು ಜುಲೈನಲ್ಲಿ ಬಿತ್ತನೆ ಮಾಡಬೇಕು. ಈ ತಳಿಯು ಬರ ಮತ್ತು ಬೆಂಕಿರೋಗಕ್ಕೆ ನಿರೋಧಕತೆ ಹೊಂದಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ತಿಳಿಸಿದರು.
ತೊಗರಿ ಕೆಂಪು ಕಾಳಿನ ಬಿ.ಆರ್.ಜಿ-5 ತಳಿಯನ್ನು ಜೂನ್‌ನಲ್ಲಿ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ 5 ಅಡಿ ಅಂತರದಲ್ಲಿ ಬಿತ್ತನೆ ಮಾಡಬೇಕು. ಈ ತಳಿಯು ಅಧಿಕ ಇಳುವರಿ ನೀಡುವುದಲ್ಲದೆ ಸೊರಗು ರೋಗ ನಿರೋಧಕತೆ ಹೊಂದಿದೆ ಎಂದರು.
ಕೊಳೆ ರೋಗ ಹತೋಟಿ
1 ಕಿ.ಗ್ರಾಂ. ರಾಗಿ ಬಿತ್ತನೆ ಬೀಜಕ್ಕೆ 200 ಗ್ರಾಂ. ಅಜೋಸ್ಪಿರಿಲ್ಲಮ್ ಜೀವಾಣುವಿನಿಂದ ಬೀಜೋಪಚಾರ ಮಾಡಬೇಕು. 1 ಕಿ.ಗ್ರಾಂ. ತೊಗರಿ ಬಿತ್ತನೆ ಬೀಜಕ್ಕೆ 200 ಗ್ರಾಂ. ರೈಜೋಬಿಯಂ ಜೀವಾಣುವಿನಿಂದ ಬೀಜೋಪಚಾರ ಮಾಡಬೇಕು. ಇದರಿಂದ ಸಸಿಗಳ ಹಂತದಲ್ಲಿ ಕಂಡುಬರುವ ಬೇರು ಕೊಳೆ ರೋಗ ಹತೋಟಿಗೆ ತರಬಹುದು. ಜತೆಗೆ ಮಣ್ಣಿನಲ್ಲಿರುವ ಸಾರಜನಕ ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಪಿ.ವೀರನಾಗಪ್ಪ ಹೇಳಿದರು.