

| ಸತೀಶ್ ಕೆ.ಬಳ್ಳಾರಿ ಬೆಂಗಳೂರು
ನಗರದಲ್ಲಿ ಉತ್ಪಾದನೆಯಾಗುವ ಮಿಶ್ರ ಕಸವನ್ನು ಚಿಗರೇನಹಳ್ಳಿಯ ಭೂಭರ್ತಿಗೆ ಕಳುಹಿಸದೆ, ಅಲ್ಲಿರುವ ಸಂಸ್ಕರಣಾ ಘಟಕ್ಕೆ ಶೇ.100 ಹಸಿ ತ್ಯಾಜ್ಯವನ್ನು ಕಳುಹಿಸಲು ಬಿಬಿಎಂಪಿ ತೀರ್ವನಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಮಿಶ್ರ ತ್ಯಾಜ್ಯವನ್ನು ಚಿಗರೇನಹಳ್ಳಿ ಭೂಭರ್ತಿಗೆ ಸುರಿಯುವುದನ್ನು ವಿರೋಧಿಸಿ (ಅ.19ರಿಂದ 25) ಸ್ಥಳೀಯರು ಪ್ರತಿಭಟನೆ ಮಾಡಿದ್ದರು. ಪ್ರತಿನಿತ್ಯ 20ರಿಂದ 30 ಕಾಂಪ್ಯಾಕ್ಟರ್ ಮಿಶ್ರ ಕಸ ತಂದು ಭೂಭರ್ತಿಗೆ ಸುರಿಯುತ್ತಿರುವುದರಿಂದ ಸುತ್ತಲಿನ ಗ್ರಾಮಗಳಲ್ಲಿ ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗಿದೆ. ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಭೂಭರ್ತಿ ಕ್ವಾರಿಯಲ್ಲಿ ತಡೆಗೋಡೆ ಇಲ್ಲದೆ ಲಿಚೆಟ್ (ಕಸದಿಂದ ಸೋರುವ ನೀರಿನಾಂಶ) ಗ್ರಾಮಗಳತ್ತ ಹರಿಯುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ದೊಡ್ಡಬಳ್ಳಾಪುರ ತಾಲೂಕಿನ ಚಿಗರೇನಹಳ್ಳಿಯಲ್ಲಿ ಎಂಎಸ್ಜಿಪಿ ಖಾಸಗಿ ಸಂಸ್ಥೆಯಿಂದ 500 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. 300 ಟನ್ ಹಸಿ ಕಸವನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಉಳಿದಂತೆ ಚಿಗರೇನಹಳ್ಳಿ ಕ್ವಾರಿಗೆ 200ರಿಂದ 250 ಟನ್ ಮಿಶ್ರತ್ಯಾಜ್ಯ ಸುರಿಯಲಾಗುತ್ತಿದೆ. ಹೀಗಿರುವಾಗ, ಹೆಚ್ಚುವರಿ ಕಸವನ್ನು ಕ್ವಾರಿಯ ಭೂಭರ್ತಿಗೆ ಕಳುಹಿಸುವ ವಿಚಾರ ಸತ್ಯಕ್ಕೆ ದೂರವಾಗಿದೆ. ಹಸಿ ಕಸವನ್ನು ಮಾತ್ರ ಚಿಗರೇನಹಳ್ಳಿ ಎಂಎಸ್ಜಿಪಿ ಸಂಸ್ಕರಣಾ ಘಟಕ್ಕೆ ಕಳುಹಿಸಲು ರ್ಚಚಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚಾಗಿದೆ ಹಸಿಕಸದ ಪ್ರಮಾಣ
ಹಿಂದಿನ 2 ತಿಂಗಳಿಂದ 40 ವಾರ್ಡ್ಗಳಲ್ಲಿ ಮನೆ- ಮನೆಗಳಿಂದ ಕೇವಲ ಹಸಿಕಸ ಸಂಗ್ರಹಿಸ ಲಾಗುತ್ತಿದೆ. ಜತೆಗೆ, ಪ್ರತ್ಯೇಕಿಸಿದ ಕಸ ನೀಡುವಂತೆ ಬೃಹತ್ ತ್ಯಾಜ್ಯ ಉತ್ಪಾದಕಾ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಹೀಗಾಗಿ, ಮೊದಲಿಗಿಂತಲೂ ಹೆಚ್ಚಾಗಿ ಹಸಿತ್ಯಾಜ್ಯ ಉತ್ಪಾ ದನೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ನಗರದ 7 ಸಂಸ್ಕರಣಾ ಘಟಕಗಳಲ್ಲಿ 3 ಘಟಕ ಕಾರ್ಯನಿರ್ವಹಣೆ ನಿಂತಿದೆ. ಕೇವಲ 4 ಸಂಸ್ಕರಣಾ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಾದ ಹಸಿ ಕಸವನ್ನು ಚಿಗರೇನಹಳ್ಳಿಗೆ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.
ವಾರದಲ್ಲಿ ಮಿಶ್ರಕಸ ಸಾಗಣೆ ಸ್ಥಗಿತ
ನಗರದಿಂದ ಪ್ರತಿನಿತ್ಯ ಚಿಗರೇನಹಳ್ಳಿಗೆ 58ರಿಂದ 60 ಕಸದ ಕಾಂಪ್ಯಾಕ್ಟರ್ ಕಸ ಸಾಗಾಣಿಕೆ ಮಾಡಲಾಗುತ್ತಿದೆ. ಎಂಎಸ್ಜಿಪಿ ಸಂಸ್ಕರಣಾ ಘಟಕ್ಕೆ 35 ಕಾಂಪ್ಯಾಕ್ಟರ್, ಕ್ವಾರಿಗೆ 25 ಕಾಂಪ್ಯಾಕ್ಟರ್ ಮಿಶ್ರಕಸ ಹೋಗುತ್ತಿದೆ. ಸ್ಥಳೀಯರು ಕಸ ಸುರಿಯುವ ಕುರಿತು ಪ್ರತಿಭಟನೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೇ ಯೋಜನೆ ರೂಪಿಸಿದಂತೆ ಮುಂದಿನ ಒಂದು ವಾರದಲ್ಲಿ ಚಿಗರೇನಹಳ್ಳಿಗೆ ಕೇವಲ ಹಸಿತ್ಯಾಜ್ಯವನ್ನು ಸಂಸ್ಕರಣಾ ಘಟಕ್ಕೆ ಕಳುಹಿಸಲು ಕ್ರಮವಹಿಸಲಾಗುವುದು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.