

ಕಡೂರು: ಕನ್ನಡಪರ ಸಂಘಟನೆಗಳು ಕರೆನೀಡಿದ್ದ ಬಂದ್‌ಗೆ ಪಟ್ಟಣದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದಲೇ ಜನಸಂಚಾರ, ಕಾರ್ಯಚಟುವಟಿಕೆ ಎಂದಿನಂತೆ ಇತ್ತು. ಪಟ್ಟಣದ ಕದಂಬವೃತ್ತ, ಬಸವೇಶ್ವರವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆಗಳ ಭಾಗದ ಬಹುತೇಕ ಅಂಗಡಿಮುಂಗಟ್ಟನ್ನು ಸಂಜೆಯವರೆಗೆ ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಬಹುತೇಕ ಖಾಸಗಿ ಶಾಲೆಗಳ ಮಕ್ಕಳಿಗೆ ರಜೆ ನೀಡಿ ಬಂದ್‌ಗೆ ಸಾಥ್ ನೀಡಲಾಗಿತ್ತು. ಚಿತ್ರಮಂದಿರಗಳಲ್ಲಿ ಪ್ರದರ್ಶನ ನಡೆಯಲಿಲ್ಲ.
ಪಟ್ಟಣದ ಕೆಎಲ್‌ವಿ ವೃತ್ತ, ಅಂಬೇಡ್ಕರ್ ವೃತ್ತ ಭಾಗದ ರಸ್ತೆಗಳಲ್ಲಿ ಅಂಗಡಿಗಳು, ಹೋಟೆಲ್‌ಗಳು, ದಿನಸಿ, ತರಕಾರಿ ಹಾಗೂ ಅಗತ್ಯ ಸೇವೆಗಳ ಅಂಗಡಿಗಳು ತೆರೆದಿದ್ದವು. ಸರ್ಕಾರಿ ಕಚೇರಿಗಳು ಹಾಗೂ ಕೋರ್ಟ್ ಕಲಾಪಗಳು, ಸರ್ಕಾರಿ ಶಾಲಾ ಕಾಲೇಜುಗಳು ತೆರೆದಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ತಾಲೂಕು ಕಚೇರಿಯ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.
ಪಟ್ಟಣದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ನಾಗವಾರ ರಮೇಶ್ ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಎಂ.ಪಿ.ಕವಿರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಎಂ.ಸತೀಶ್, ಉಪಾಧ್ಯಕ್ಷ ಟೊಮ್ಯಾಟೋ ಗೋವಿಂದಪ್ಪ, ಎಂ.ಎಸ್.ಮಲ್ಲಿಕಾರ್ಜುನ್, ಟಿ.ಎಂ.ಭರತ್, ಜೆಡಿಎಸ್ ಯುವ ಘಟಕದ ಹರ್ಷಿತ್, ಮಂಜು ಇತರರು ಪಾಲ್ಗೊಂಡಿದ್ದರು.
ಮಾರ್ವಾಡಿ ವಿಷ್ಣು ಸಮಾಜಕ್ಕೆ ಸೇರಿದ ಬಹುತೇಕ ಎಲ್ಲ ಅಂಗಡಿಗಳ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜದ ಯುವಕರು ಕಾವೇರಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ವಿಷ್ಣು ಸಮಾಜದ ಅಧ್ಯಕ್ಷ ವೀರಾಂರಾಜ್ ಸಿಂಗ್ ಮಾತನಾಡಿ, ನಾವು ಬೇರೆ ರಾಜ್ಯದಿಂದ ಬಂದು ವ್ಯಾಪಾರ ಮಾಡುತ್ತಿದ್ದರೂ ಇಲ್ಲಿಯ ನೆಲ, ಜಲ, ಭಾಷೆ ವಿಷಯದಲ್ಲಿ ಕನ್ನಡದ ಪರವಾಗಿದ್ದೇವೆ. ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ರಾಜ್ಯದ ವಿಷಯದಲ್ಲಿ ಯಾವುದೇ ಪ್ರತಿಭಟನೆ, ಬಂದ್ ಕರೆ ನೀಡಿದರೂ ನಮ್ಮ ಸಂಘಟನೆ ಬೆಂಬಲ ನೀಡುತ್ತಿದೆ ಎಂದರು. ಸಮಾಜದ ಮುಖಂಡರಾದ ನಾರಾಯಣ್ ಸಿಂಗ್, ಗೋಪಾಲ್, ದೇವಾಸಿಂಗ್, ಉತ್ತಮ್ ಸಿಂಗ್, ಚಂದನ್ ಸಿಂಗ್, ಮಾಂಗಿಲಾಲ್, ನರಪತ್ ಸಿಂಗ್, ಭವರ್‌ಸೇನ್, ಕಿಶೋರ್‌ಕುಮಾರ್, ಚಿರಾಗ್ ಸಿಂಗ್, ರಾಹುಲ್ ಇತರರಿದ್ದರು.
ಸಿಪಿಐ ಕೆ.ಆರ್.ಶಿವಕುಮಾರ್ ಮತ್ತು ಪಿಎಸ್‌ಐ ಧನಂಜಯ್ ನೇತೃತ್ವದಲ್ಲಿ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.