

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಕರೆ ನೀಡಲಾಗಿದ್ದ ರಾಜ್ಯ ಸಾರಿಗೆ ನೌಕರರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಬಂದ್ ಬಿಸಿ ಜನತೆಗೆ ತಟ್ಟಲಿಲ್ಲ.
ಬೆಳಗ್ಗೆ ಬಸ್ಗಳು ಬಂದ್ ಇದ್ದವಾದರೂ 7.30ರ ಬಳಿಕ ಒಂದೊಂದೇ ಬಸ್ ರಸ್ತೆಗಿಳಿಯಲಾರಂಭಿಸಿದವು. 10 ಗಂಟೆಯ ಹೊತ್ತಿಗೆ ಶೇ.50ಕ್ಕೂ ಹೆಚ್ಚು ಬಸ್ ಸಂಚಾರ ಆರಂಭಗೊಂಡಿತ್ತು. ಮಧ್ಯಾಹ್ನ 12ರ ಬಳಿಕ ಎಂದಿನಂತೆ ಬಸ್ ಸಂಚಾರ ಶುರುವಾಗಿತ್ತು.
ಬೆಳಗ್ಗೆ ಮಾತ್ರ ಜನ ತೊಂದರೆ ಅನುಭವಿಸಿದರು. ಸೋಮವಾರ ರಾತ್ರಿ ವಸತಿಗೆ ಹೋಗಿದ್ದ ಬಸ್ಗಳು ಮಾತ್ರವೇ ಮೊದಲು ನಿಲ್ದಾಣಕ್ಕೆ ಬಂದು ನಿಂತಿದ್ದವು. ಇದಾದ ಕೆಲ ಹೊತ್ತಿನ ಬಳಿಕ ಧಾರವಾಡ ಕಡೆಯಿಂದ ಬಸ್ಗಳು ಬರಲಾರಂಭಿಸುತ್ತಿದ್ದಂತೆಯೇ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದಲೂ ಧಾರವಾಡ ಸೇರಿ ಪ್ರಮುಖ ನಗರಗಳ ಬಸ್ ಸೇವೆ ಆರಂಭಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರ ಪೊಲೀಸ್ ಆಯುಕ್ತ ಬೋರಸೆ ಭೂಷಣ ಗುಲಾಬರಾವ್ ನಿಲ್ದಾಣಕ್ಕೆ ಆಗಮಿಸಿ ಭದ್ರತೆ ಪರಿಶೀಲಿಸಿದರು.
ಮಧ್ಯಾಹ್ನದ ಬಳಿಕ ಸಿಬ್ಬಂದಿ ಹಾಜರ್: ಬೆಳಗ್ಗೆಯಿಂದಲೇ ಎಲ್ಲ ಸಿಬ್ಬಂದಿಗೆ ಕರೆ ನೀಡಿದ್ದೇವು. ಒಬ್ಬೊಬ್ಬರಾಗಿ ಬಂದು ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಮಧ್ಯಾಹ್ನ 12ರ ಹೊತ್ತಿಗೆ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, ಎಂದಿನಂತೆ ಬಸ್ ಕಾರ್ಯಾಚರಣೆ ನಡೆದಿದೆ ಎಂದು ವಾಕರಸಾ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ವಿಜಯವಾಣಿಗೆ ತಿಳಿಸಿದ್ದಾರೆ.
ಚಿಕ್ಕೋಡಿ ವರದಿ: ಚಿಕ್ಕೋಡಿ ಉಪವಿಭಾಗದಲ್ಲಿ ಶೇ. 50 ಮಾತ್ರ ಬಸ್ ಸಂಚಾರ ಇತ್ತು. ಪಟ್ಟಣದಿಂದ ಸ್ಥಳಿಯವಾಗಿ ಓಡಾಡುವ ಬಸ್ಗಳು ಶೇ. 60, ಬೇರೆ ತಾಲೂಕುಗಳು ಮತ್ತು ದೂರದ ಊರುಗಳಿಗೆ ತೆರಳುವ ಬಸ್ಗಳು ಕೇವಲ ಶೇ.20 ಸಂಚರಿಸಿದ್ದರಿಂದ ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಷ್ಕರದ ಬಿಸಿ ತಟ್ಟಿತು. ಹಾಜರಾಗುವಂತೆ ಸೂಚಿಸಿದ್ದರೂ ನೌಕರರು ಗೈರಾಗಿದ್ದರು. ಸ್ಥಳಿಯವಾಗಿ ಹೆಚ್ಚಾಗಿ ಸಮಸ್ಯೆಯಾಗಿಲ್ಲ. ದೂರದ ಪ್ರಯಾಣಿಕರಿಗೆ ಸಮಸ್ಯೆಯಾಗಿದ್ದು, ಅಥಣಿಯಲ್ಲೂ ತೊಂದರೆಯಾಗಿದೆ. ಇನ್ನುಳಿದಂತೆ ಅಷ್ಟೇನೂ ಸಮಸ್ಯೆಯಾಗಿಲ್ಲ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮಠಪತಿ ತಿಳಿಸಿದ್ದಾರೆ.