

ಮಡಿಕೇರಿ: ಮಡಿಕೇರಿಯ ಸಂತಮೈಕಲರ ಶಾಲಾ ಮತಗಟ್ಟೆಯಲ್ಲಿ ಹಿರಿಯ ನಾಗರಿಕರಾದ ಮಿಟ್ಟು ಚಂಗಪ್ಪ ಮೊದಲ ಮತದಾರರಾಗಿ ಸತತ ೩೦ನೇ ಬಾರಿಗೆ ಮತ ಚಲಾಯಿಸಿದ ಕೀರ್ತಿಗೆ ಪಾತ್ರರಾದರು.
ಬುಧವಾರ ಸಂತಮೈಖಲರ ಶಾಲಾ ಮೈದಾನಕ್ಕೆ ಬೆಳಗ್ಗೆ ೬.೩೦ ಗಂಟೆಗೇ ಆಗಮಿಸಿದ ಮಿಟ್ಟು ಚಂಗಪ್ಪ ೭ ಗಂಟೆಗೆ ಮತಗಟ್ಟೆ ತೆರೆಯುತ್ತಿದ್ದಂತೆಯೇ ಪತ್ನಿ ಯಶಿ ಜತೆ ಮೊದಲು ಸರದಿ ಸಾಲಿನಲ್ಲಿ ನಿಂತು ಮತಗಟ್ಟೆಗೆ ಪ್ರಥಮರಾಗಿ ತೆರಳಿ ಹಕ್ಕು ಚಲಾಯಿಸಿದರು. ೧೯೬೨ ರಲ್ಲಿ ಪ್ರಥಮ ಬಾರಿಗೆ ಮತಗಟ್ಟೆಯ ಮೊದಲ ಮತದಾರರಾಗಿ ಹಕ್ಕು ಚಲಾಯಿಸಲು ಪ್ರಾರಂಭಿಸಿದ ಮಿಟ್ಟು ಚಂಗಪ್ಪ ಅಲ್ಲಿಂದ ಪ್ರತೀ ಚುನಾವಣೆಯಲ್ಲಿಯೂ ಮೊದಲ ಮತದಾರರಾಗಿ ಮತಹಾಕುತ್ತಾ ಬಂದಿದ್ದಾರೆ.
ಈ ಬಾರಿ ತಾನು ೩೦ನೇ ಸಲ ಮತದಾನ ಮಾಡುತ್ತಿದ್ದು, ಪ್ರತೀಯೋರ್ವರೂ ಮತಚಲಾಯಿಸಲೇಬೇಕೆಂದು ಮನವಿ ಮಾಡಿದ ಅವರು, ಮತಹಾಕಿದ ಬಳಿಕ ಮಿಟ್ಟು ದಂಪತಿ ಮತದಾನದ ಸಂಕೇತವಾದ ಇಂಕ್ ಹಾಕಿದ ಬೆರಳನ್ನು ಎತ್ತಿ ಸಂಭ್ರಮ ವ್ಯಕ್ತಪಡಿಸಿದರು.