

ಬೀರೂರು: ಬೀರೂರಲ್ಲಿ ಮಿತ್ರ ಸಮಾಜ ಮತ್ತು ಪುರಸಭೆಯಿಂದ ಪ್ರತಿಷ್ಠಾಪಿಸಿದ್ದ ಸತ್ಯ ಗಣಪತಿಯನ್ನು ಬಾಕಿನ ಕೆರೆಯಲ್ಲಿ ವಿಸರ್ಜಿಸಲಾಯಿತು.
ಗಣೇಶ ಚತುರ್ಥಿಯಿಂದ ಪ್ರತಿದಿನ ವಿಶೇಷ ಅಲಂಕಾರ, ಪೂಜೆ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಪಟ್ಟಣದ ಆಟೋ ಸಂಘ, ಟ್ಯಾಕ್ಸಿ, ಲಾರಿ, ಪತ್ರಕರ್ತರು, ಛಾಯಾಗ್ರಾಹಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಡ್ಯಾನ್ಸ್, ಭಜನೆ ಸೇರಿದಂತೆ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಗಣ ಹೋಮ, ಜೈನ ಸಮುದಾಯದಿಂದ ಅನ್ನ ಸಂತರ್ಪಣೆ ನಡೆಯಿತು. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಹಾನವಮಿ ಬಯಲಿಗೆ ಬಂದು ಶ್ರೀಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕವನ್ನು ಮುಗಿಸಿಕೊಂಡು ಮತ್ತೆ ಮೆರವಣಿಗೆ ಹೊರಟು ಮಹಾತ್ಮ ಗಾಂಧಿ ವೃತ್ತ, ರೈಲ್ವೆ ಸ್ಟೇಷನ್ ರಸ್ತೆ ನಂತರ ಲಿಂಗದಹಳ್ಳಿ ಮಾರ್ಗವಾಗಿ ಆರಂಭಿಸಲಾಗಿತ್ತು. ಲಿಂಗದಹಳ್ಳಿ ರಸ್ತೆಯಲ್ಲಿ ಪೊಲೀಸರು ಡಿಜೆಯನ್ನು ನಿಲ್ಲಿಸಲು ಆದೇಶ ನೀಡಿದರು. ಇದಕ್ಕೆ ಕೆಂಡಾಮಂಡಲರಾದ ಯುವಕರು ಮತ್ತು ಪುರಸಭೆ ಸದಸ್ಯರು ಪ್ರತಿವರ್ಷ ಈ ಮೆರವಣಿಗೆ ನಡೆಸಲಾಗುತ್ತಿದೆ. ಮಾರ್ಗದ ಕ್ಯಾಂಪ್‌ನಲ್ಲಿ ಡಿಜೆಗೆ ತಡೆ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಕಾಲ ಗಣಪತಿಯನ್ನು ಅಲ್ಲಿಯೇ ನಿಲ್ಲಿಸಿ ಮತ್ತೆ ಪೊಲೀಸರ ಮನವೊಲಿಸಿ ಡಿಜೆ ಬೇಡ ಕೇವಲ ಮಂಗಳವಾದ್ಯಗಳೊಂದಿಗೆ ಕರೆದೊಯ್ಯಲಾಯಿತು. ರಸ್ತೆ ಅಕ್ಕಪಕ್ಕದಲ್ಲಿದ್ದ ಮಹಿಳೆಯರು ಹಣ್ಣು, ಕಾಯಿ ನೀಡಿ ಪೂಜೆ ಸಮರ್ಪಿಸಿದರು. ನಂತರ ಬಾಕಿನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.