

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೈಟೊಕಾಂಡ್ರಿಯಾವು ಎಲ್ಲ ಜೀವಕೋಶಗಳ ಶಕ್ತಿ ಕೇಂದ್ರವಾಗಿದೆ. ಮೈಟೊಕಾಂಡ್ರಿಯ ಕಾಯಿಲೆಗಳು ಬಹಳ ಅಪರೂಪದ ಕಾಯಿಲೆಗಳಾಗಿದ್ದು, ಜೀವಕೋಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ರೋಗಗಳನ್ನು ಗುಣಪಡಿಸಬಹುದು ಎಂದು ಎಸ್ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ಕುಮಾರ್ ಹೇಳಿದರು.
ನಗರದ ಎಸ್ಡಿಎಂ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಸೊಸೈಟಿ ಆಫ್ ಮೈಟೊಕಾಂಡ್ರಿಯಾ ರಿಸರ್ಚ್ ಆ್ಯಂಡ್ ಮೆಡಿಸಿನ್ ಇಂಡಿಯಾ 10ನೇ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜೀವನದ ಗುಣಮಟ್ಟ ಆಧರಿಸಿ ಸಂಶೋಧನೆ ಮಾಡಬೇಕು. ಎಸ್ಡಿಎಂ ವಿವಿಯಲ್ಲಿ ಮೈಟೊಕಾಂಡ್ರಿಯದ ಸಂಶೋಧನೆಗಳು ಪ್ರಗತಿಯಲ್ಲಿವೆ ಎಂದರು.
ಸೊಸೈಟಿ ಆಫ್ ಮೈಟೊಕಾಂಡ್ರಿಯಾ ರಿಸರ್ಚ್ ಆ್ಯಂಡ್ ಮೆಡಿಸಿನ್ ಭಾರತದ ಅಧ್ಯಕ್ಷ ಡಾ. ಕೆ ತಂಗರಾಜ್ ಅವರು ಸೊಸೈಟಿಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸಮ್ಮೇಳನದ ಭಾಗವಾಗಿ ಏರ್ಪಡಿಸಿದ್ದ ಬಿತ್ತಿಪತ್ರ ಪ್ರದರ್ಶನದಲ್ಲಿ ಅತ್ಯುತ್ತಮ ಬಿತ್ತಿಪತ್ರ ಪ್ರಶಸ್ತಿ ಮತ್ತು ಯುವ ವಿಜ್ಞಾನಿಗಳ ಪ್ರಶಸ್ತಿಗಳನ್ನು ನೀಡಲಾಯಿತು.
ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರ್ ಕುಮಾರ್, ವಿವಿ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ, ವಿದ್ಯಾರ್ಥಿಗಳು, ದೇಶ-ವಿದೇಶಗಳಿಂದ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಡಾ. ಕೆ ಸತ್ಯಮೂರ್ತಿ ಸ್ವಾಗತಿಸಿದರು. ಅರವಿಂದ ನಾರಾಯಣ ನಿರೂಪಿಸಿದರು. ಡಾ. ಅಜಯ್ ಕುಮಾರ ಓಲಿ ವಂದಿಸಿದರು.