ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹ

Mithun rai
Published on

ಮಂಗಳೂರು: ಸುಳ್ಯದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಶೀಘ್ರ ಆರೋಪಿಗಳನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮೃತಪಟ್ಟ ಪ್ರವೀಣ್ ಹಾಗೂ ಕೆಲ ದಿನಗಳ ಹಿಂದೆ ಮತಾಂಧರ ಧಾಳಿಗೆ ಒಳಗಾಗಿ ಸಾವನ್ನಪ್ಪಿದ ಮಸೂದ್ ಈ ಇಬ್ಬರ ಕುಟುಂಬಗಳಿಗೂ ರಾಜ್ಯ ಸರ್ಕಾರ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಒದಗಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದ್ದಾರೆ.
ರಾಜಕೀಯ ದ್ವೇಷಕ್ಕಾಗಿ ಯಾವುದೇ ಪಕ್ಷದ ಕಾರ್ಯಕರ್ತರು ಬಲಿಯಾಗಬಾರದು. ರಾಜಕಾರಣಿಗಳ ಪ್ರಚೋದನೆಯ ಮಾತಿಗೆ ಕಿವಿಗೊಟ್ಟು ಸಮಾಜದಲ್ಲಿ ದ್ವೇಷ ಸೃಷ್ಟಿಯಾಗಲು ಬಿಡಬಾರದು. ಈಗಾಗಲೇ ಕರಾವಳಿಯಲ್ಲಿ ಕೋಮು ದ್ವೇಷಕ್ಕೆ ಅನೇಕ ಯುವಕರು ಬಲಿಯಾಗಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಅನೇಕರು ಶಾಸಕ, ಸಂಸದರಾಗಿದ್ದಾರೆ. ಚುನಾವಣೆ ಗೆದ್ದ ಬಳಿಕ ಅವರ ಮನೆಯವರನ್ನು ತಿರುಗಿ ನೋಡಿದ ಉದಾಹರಣೆಗಳಿಲ್ಲ. ಇನ್ನಾದರೂ ಯುವ ಸಮೂಹ ಅರ್ಥ ಮಾಡಿಕೊಂಡು, ರಾಜಕಾರಣಿಗಳ ದ್ವೇಷದ ಮಾತಿಗೆ ಬಲಿಯಾಗದೆ ಸಮಾಜಮುಖಿ ಕೆಲಸ ಮಾಡಬೇಕು ಎಂದವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಶುಭೋದಯ ಆಳ್ವ, ಅನಿಲ್ ಕುಮಾರ್, ಸವಾದ್ ಸುಳ್ಯ, ಶಾಂತಲಾ ಗಟ್ಟಿ, ಚಂದ್ರಕಲಾ, ಅಪ್ಪಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net