

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಥೆಗಳು ಕಲ್ಪನೆ ಹಾಗೂ ಆಲೋಚನೆಗಳನ್ನು ಹುಟ್ಟು ಹಾಕಿ ಓದುಗರಲ್ಲಿ ವೈಚಾರಿಕತೆಯನ್ನು ಸೃಷ್ಟಿಸುತ್ತವೆ. ಕಥಾವಸ್ತು ನಿರ್ಧರಿಸಿ ಕಥೆ ಅಭಿವ್ಯಕ್ತಿಗೊಳಿಸುವುದು ಮುಖ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಚೆನ್ನಬಸಪ್ಪ ಸಾದರ ಅವರ ಸಂಸ್ಮರಣೆಯಲ್ಲಿ ಸೋಮವಾರ ಆಯೋಜಿಸಿದ್ದ `ಮಿತಸಮಯ ಮಹಿಳಾ ಕಥಾಸಂಚಯ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹತ್ತು ಜನ ಕಥೆಗಾರ್ತಿಯರ ತಲಾ ಹತ್ತು ನಿಮಿಷದ ಅವಽಯ ಹತ್ತು ಹೊಸ ಕಥೆಗಳ ವಾಚನಗಳು ಸರಳವಾದ ವಿಭಿನ್ನ ಶೈಲಿಯಲ್ಲಿ ಅಭಿವ್ಯಕ್ತಗೊಳಿಸಿದ ಕಥೆಗಳು ವೈಚಾರಿಕತೆಗಳಿಂದ ಕೂಡಿವೆ. ಎಲ್ಲರ ವಿಷಯ ಆಯ್ಕೆಗಳು ಸೊಗಸಾಗಿವೆ. ತಮ್ಮ ಆಸಕ್ತಿಗೆ ಅನುಗುಣವಾಗಿ ಕಥೆಗಳ ಆಯ್ಕೆಗಳಿವೆ. ಹೊಸ ತಲೆಮಾರಿನ ಆಲೋಚನೆಗಳು ವಿಭಿನ್ನ ಶೈಲಿಯಲ್ಲಿವೆ. ಹೆಣ್ಣು ಮಕ್ಕಳು ಒಂದು ತುಡಿತ ಇಟ್ಟುಕೊಂಡು ಕಥೆ ರಚಿಸಿದ್ದಾರೆ. ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಕಿರುಸಾಹಿತ್ಯ ಬೆಳೆಸುವ ಈ ಹೊಸ ಪ್ರಯೋಗವಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಕಲಬುರಗಿಯ ಸಂಧ್ಯಾ ಹೊನಗುಂಟಿಕರ, ಧಾರವಾಡದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ವಿನಯಾ ಒಕ್ಕುಂದ, ಪ್ರಜ್ಞಾ ಮತ್ತಿಹಳ್ಳಿ, ಬೆಳಗಾವಿಯ ಶ್ವೇತಾ ನರಗುಂದ, ಬೆಳಗಾವಿಯ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಹುಬ್ಬಳ್ಳಿಯ ನಿರ್ಮಲಾ ಶೆಟ್ಟರ, ರೇಣುಕಾ ಕೋಡಗುಂಟಿ, ಸುನಂದಾ ಕಡಮೆ, ಶಿರಸಿಯ ಡಾ. ಶೋಭಾ ಹೆಗಡೆ, ಕಥಾವಾಚನ ಮಾಡಿದರು. ಅನಸೂಯಾ ಸಾದರ, ರಾಜೇಶ್ವರಿ ಸಾದರ, ಕವಿತಾ ಸಾದರ ನಿರ್ವಹಿಸಿದರು.
ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಾ ಚಿಕ್ಕೇರೂರ ನಿರೂಪಿಸಿದರು.