

ಸಾಗರ: ಕಿರಿಯ ವಕೀಲರು ಯಶಸ್ವಿಯಾಗಿ ತೊಡಗಿಕೊಳ್ಳಲು ಹಿರಿಯ ವಕೀಲರ ಮಾರ್ಗದರ್ಶನ ಅವಶ್ಯ. ಸಾಗರದ ನ್ಯಾಯಾಲಯದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರಿದ್ದು ಕಲಾಪಗಳು ಯಶಸ್ವಿಯಾಗಿ ನಡೆಯಲು ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜಿ.ಪ್ರಭಾವತಿ ಹೇಳಿದರು.
ನಗರದ ವಕೀಲರ ಭವನದಲ್ಲಿ ಶುಕ್ರವಾರ ವಕೀಲರ ಸಂಘ ಮತ್ತು ಕೆ.ಟಿ.ಶೆಟ್ಟಿ ಶಿಷ್ಯವೃಂದ ವತಿಯಿಂದ ಪತ್ರಕರ್ತ ಜಿ.ನಾಗೇಶ್ ಬರೆದಿರುವ ಮಿತಭಾಷಿ ಕೆ.ಟಿ.ಶೆಟ್ಟಿ ಕೃತಿ ಬಿಡುಗಡೆ, ಗುರುವಂದನೆ ಮತ್ತು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಟಿ.ಶೆಟ್ಟಿ ಅವರು ಸಾಗರ ನ್ಯಾಯಾಲಯಕ್ಕೆ ಐದೂವರೆ ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದು ಗಮನಾರ್ಹ. ಅವರ ಮಾರ್ಗದರ್ಶನದಲ್ಲಿ 25ಕ್ಕೂ ಹೆಚ್ಚು ಕಿರಿಯ ವಕೀಲರು ತಯಾರಾಗಿದ್ದು, ಸ್ವತಂತ್ರವಾಗಿ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ತಮ್ಮ ಅನುಭವವನ್ನು ಕಿರಿಯರಿಗೆ ಧಾರೆ ಎರೆಯುವುದು ಗುರುಪರಂಪರೆಯ ಸಾರ್ಥಕ ಕ್ಷಣವಾಗಿರುತ್ತದೆ. ಕೆ.ಟಿ.ಶೆಟ್ಟರು ತಮ್ಮ ವೃತ್ತಿಯನ್ನು ನಿಲ್ಲಿಸಿ ಇದೀಗ ಬೆಂಗಳೂರಿಗೆ ತೆರಳುತ್ತಿರುವುದು ಬೇಸರ ಎನಿಸಿದರೂ, ಅವರ ಸೇವೆ ನಮ್ಮ ನ್ಯಾಯಾಲಯಕ್ಕೆ ಇಷ್ಟು ವರ್ಷಗಳ ಕಾಲ ಸಿಕ್ಕಿರುವುದು ಸಂತೋಷ ತಂದಿದೆ. ನಿವೃತ್ತರಾಗುತ್ತಿರುವ ಹಿರಿಯರನ್ನು ಬೀಳ್ಕೊಡುವುದು ಸತ್ಸಂಪ್ರದಾಯ. ಅವರ ಮಾರ್ಗದರ್ಶನವನ್ನು ಯುವ ವಕೀಲರು ಪಡೆದುಕೊಳ್ಳಿ ಎಂದರು.
ಜಿ.ನಾಗೇಶ್ ಬರೆದಿರುವ ‘ಮಿತಭಾಷಿ ಕೆ.ಟಿ.ಶೆಟ್ಟಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಕೀಲ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಕೆ.ಟಿ.ಶೆಟ್ಟಿಯವರು ನಿರಂತರವಾಗಿ ತಮ್ಮ ವಕೀಲ ವೃತ್ತಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಬೆಂಗಳೂರಿಗೆ ಹೋದರೂ ಅವರು ಸಾಗರವನ್ನು ಮರೆಯದೆ ಆಗಾಗ ಬಂದು ಕಿರಿಯರಿಗೆ ಮಾರ್ಗದರ್ಶನ ಮಾಡುವ ಮೂಲಕ ತಮ್ಮ ವೃತ್ತಿಯನ್ನು ಮುಂದುವರೆಸಬೇಕು. ಅವರ ಕುರಿತು ಕೃತಿ ಬಿಡುಗಡೆ ಮಾಡುತ್ತಿರುವುದು ಅವರ ಸುದೀರ್ಘ ಬದುಕಿಗೆ ಸಂದ ಗೌರವ. ನಾನು ಬಹು ಹಿಂದಿನಿಂದಲೂ ಇವರ ಕರ್ತವ್ಯ ನಿಷ್ಠೆ ಮತ್ತು ವೃತ್ತಿಯಲ್ಲಿನ ಶಿಸ್ತನ್ನು ಗಮನಿಸಿದ್ದೇನೆ. ಕೆ.ಟಿ.ಶೆಟ್ಟಿಯವರ ವೃತ್ತಿಯ ಯಶಸ್ಸಿಗೆ ಇದು ಪ್ರಮುಖ ಕಾರಣ ಎಂದರು.
ಕೆ.ಟಿ.ಶೆಟ್ಟಿ ಅವರನ್ನು ವಕೀಲರ ಸಂಘ ಮತ್ತು ಶಿಷ್ಯವೃಂದದ ವತಿಯಿಂದ ಸನ್ಮಾನಿಸಲಾಯಿತು. ಕೆ.ಟಿ.ಶೆಟ್ಟಿ ಅವರ ಕುರಿತು ಟಿ.ಬಿ.ಮಂಜುನಾಥ ಶೆಟ್ಟಿ, ಕೆ.ಎಲ್.ಭೋಜರಾಜ್, ನಾಗಪ್ಪ, ಜಯಪ್ಪ, ರಾಜಾರಾಂ ಶೆಟ್ಟಿ ಇತರರು ಮಾತನಾಡಿದರು.
ಸಂಘದ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಎಸ್.ನಟರಾಜ್, ಶ್ರೀಶೈಲ ಭೀಮಸೇನ ಭಾಗಡಿ, ಸ್ಪರ್ಶ ಎಂ. ಡಿಸೋಜ, ಹಿರಿಯ ನ್ಯಾಯವಾದಿ ಎಂ.ಬಿ.ಪುಟ್ಟಸ್ವಾಮಿ, ಲೇಖಕ ಜಿ.ನಾಗೇಶ್, ಎಚ್.ಬಿ.ರಮೇಶ್, ವಿ.ಶಂಕರ್, ಎಚ್.ಆರ್.ಶ್ರೀಧರ್ ಇದ್ದರು.