ದ್ವೇಷಕ್ಕಾಗಿ ಧರ್ಮಸ್ಥಳದ ಹೆಸರು ದುರ್ಬಳಕೆ: ಡಾ.ವೀರೇಂದ್ರ ಹೆಗ್ಗಡೆ

veerendra heggade 1
Published on

ಬೆಳ್ತಂಗಡಿ: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಕೇಳಿಬರುತ್ತಿರುವ ನಿರಂತರ ಆರೋಪಗಳ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮೌನ ಮುರಿದಿದ್ದು, ಕ್ಷೇತ್ರದ ಏಳಿಗೆ ಸಹಿಸದ ಕೆಲವರು ದ್ವೇಷ ಸಾಧನೆಗಾಗಿ ಧರ್ಮಸ್ಥಳದ ಹೆಸರು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ವೇತ್ರದ ಸಿಬ್ಬಂದಿ ವಿಭಾಗದ ಮುಖ್ಯಸ್ಥರ ಜತೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ, ಆರೋಪಗಳಿಂದ ನಾವು ಧೈರ್ಯಗುಂದಿಲ್ಲ; ಕ್ಷೇತ್ರದ ಬೆಳವಣಿಗೆ ಸಹಿಸದವರಿಂದ ದ್ವೇಷ ಸಾಧನೆಗಾಗಿ ಈ ಪ್ರಕರಣದಲ್ಲಿ ಧರ್ಮಸ್ಥಳದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಮಾಯಕ ಹೆಣ್ಣುಮಗಳ ಹತ್ಯೆಯ ತನಿಖೆಗೆ ಮೊದಲು ಆಗ್ರಹಿಸಿದ್ದೇ ನಾನು, ಸಿಬಿಐಗೆ ಒಪ್ಪಿಸಲು ಮುಖ್ಯಮಂತ್ರಿಗಳಿಗೆ ಹೇಳಿದ್ದೇ ನಾನು ಎಂದು ತಿಳಿಸಿದರು.

ಒಳ್ಳೆಯ ಕೆಲಸ ಮಾಡಿದರೆ ಎರಡು ರೀತಿಯ ಕತ್ತಿ ಇದ್ದ ಹಾಗೆ ಎಂದು ನಾನು ಯಾವಾಗಲೂ ಹೇಳುತ್ತೇನೆ, ಅದು ಎರಡೂ ಬದಿಯಿಂದ ಕೊಯ್ಯುತ್ತದೆ. ದ್ವೇಷ ಮತ್ತು ಪ್ರೀತಿ ಎರಡೂ ಇದೆ. ನಮಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೆಲವರಿಗೆ ನಮ್ಮ ಮೇಲೆ ದ್ವೇಷ, ಅಸೂಯೆ ಇದೆ. ಕ್ಷೇತ್ರದ ಸಾನ್ನಿಧ್ಯ, ಸಂಪತ್ತು ಹೇಗೆ ಬಳಸುತ್ತೇವೆ ಎಂಬ ವಿಷಯ ಮುಖ್ಯ. ನೀವೆಲ್ಲರೂ ಧೈರ್ಯದಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಕ್ಷೇತ್ರದ ಹೆಸರು ಯಾಕೆ ಎಳೆಯುತ್ತಾರೆ ಎಂದು ಗೊತ್ತಿಲ್ಲ. ಹೇಗಾದರೂ ಕ್ಷೇತ್ರವನ್ನು ಮಲಿನ ಮಾಡಬೇಕು ಎಂಬುದೇ ಅವರ ಉದ್ದೇಶ. ಅನವಶ್ಯವಾಗಿ ಶತ್ರುತ್ವ ಬೆಳೆಸುತ್ತಿದ್ದಾರೆ. ಯಾಕೆ ಸುಮ್ಮನಿದ್ದೇನೆ ಎಂದರೆ ಸಂಭಾಷಣೆ ಆರಂಭವಾಗಬಾರದು ಎಂದು. ಅವರಿಗೆ ಪ್ರಚಾರ ಬೇಕು. ನಮ್ಮ ಮೇಲೆ ಅಪಪ್ರಚಾರ ಆಗುತ್ತದೆ. ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯವಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net