ಯರಗೋಳ್​ ಡ್ಯಾಂ ನೀರು ದುರ್ಬಳಕೆ

2
ಯರಗೋಳ್​ ಡ್ಯಾಂ
Published on

ಅಕ್ರಮ ಪಂಪ್​ಸೆಟ್​ ಅಳವಡಿಕೆ - ಕ್ರಮವಹಿಸದಿದ್ದರೆ ಕುಡಿಯುವ ನೀರಿಗೂ ಪರದಾಟ

ಬೂದಿಕೋಟೆ: ಯರಗೋಳ್​ ಡ್ಯಾಂನ ನೀರನ್ನು ವ್ಯವಸಾಯ ಸೇರಿ ವಿವಿಧ ಕಾರಣಗಳಿಗೆ ಕೆಲವರು ಕಾನೂನು ಬಾಹಿರವಾಗಿ ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಡ್ಯಾಂನಲ್ಲಿ ನೀರಿನ ಪ್ರಮಾಣ ತಗ್ಗುತ್ತಿದ್ದು, ಯೋಜನೆಯ ಮೂಲ ಉದ್ದೇಶಕ್ಕೆ ನೀರಿನ ಅಭಾವ ಕಾಡುತ್ತಿದೆ.

ಜಿಲ್ಲೆಯ ಮೂರು ತಾಲೂಕುಗಳು ಸೇರಿ ಮಾರ್ಗಮಧ್ಯೆ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಯರಗೋಳ್​ ಡ್ಯಾಂ ನಿರ್ಮಿಸಲಾಗಿದೆ. ಡ್ಯಾಂ ಮೂಲಕ ಈಗಾಗಲೇ ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದೆ ಕೆಜಿಎಫ್​ ಪಟ್ಟಣಕ್ಕೂ ಯರಗೋಳ್​ ಡ್ಯಾಂನಿಂದ ನೀರು ಪೂರೈಸಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ. ಇದಕ್ಕಾಗಿ ಜನಪ್ರತಿನಿಧಿಗಳು ಈಗಾಗಲೇ ಯೋಜನೆಯನ್ನು ವಿಸ್ತರಿಸುವ ಆಲೋಚನೆಯಲ್ಲಿದ್ದಾರೆ. ಇತ್ತ ಯರಗೋಳ್​ ಡ್ಯಾಂ ನೋಡಲು ಬರುವ

ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಮುಂದೆ ಪಂಚಾಯಿತಿ ಮೂಲಕ ಪ್ರವಾಸಿಗರಿಗಾಗಿ ಸರಿಯಾದ ವ್ಯವಸ್ಥೆ ಕೈಗೊಂಡರೆ ಪಂಚಾಯಿತಿಗೆ ಆದಾಯದ ಮೂಲವೂ ಹೆಚ್ಚಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಮಧ್ಯೆ ದಿನ್ನೂರು, ಪಲಮಡಗು, ಯರಗೋಳ್​ ಸೇರಿ ಇತರ ಗ್ರಾಮಗಳ ಜನರು ಯರಗೋಳ್​ ಡ್ಯಾಂನ ನೀರಿನಲ್ಲಿ ಅಕ್ರಮವಾಗಿ ಪಂಪ್​ಸೆಟ್​ಗಳನ್ನು ಅಳವಡಿಸಿದ್ದಾರೆ. ಪಂಪ್​ಸೆಟ್​ ಮೂಲಕ ನೀರನ್ನು ಹರಿಸಿ, ವ್ಯವಸಾಯ ಸೇರಿ ಇತರ ಕಾರಣಗಳಿಗೆ ಬಳಕೆ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಡ್ಯಾಂ ನಿಮಾರ್ಣದ ಸಮಯದಲ್ಲಿ ಪಂಪ್​ಸೆಟ್​ಗಳನ್ನು ಬಳಸಿ ನೀರನ್ನು ಬಳಕೆ ಮಾಡುತ್ತಿದ್ದರು. ಡ್ಯಾಂ ಕಾಮಗಾರಿ ಪೂರ್ಣವಾದ ನಂತರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪಂಪ್​ಸೆಟ್​ಗಳನ್ನು ತೆರವುಗೊಳಿಸಲು ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಚಿಸಿದ್ದರು. ಅದರಂತೆ ಕೆಲವರು ತೆರವು ಮಾಡಿ ಈಗ ಮತ್ತೆ ರಾಜಾರೋಷವಾಗಿ ಪಂಪ್​ಸೆಟ್​ಗಳನ್ನು ಅಳವಡಿಸಿಕೊಂಡಿದ್ದಾರೆ.

ಕೆಲವರು ರಾತ್ರಿ ಸಮಯದಲ್ಲಿ ನೀರನ್ನು ಪಂಪ್​ ಮಾಡುತ್ತಿದ್ದರೆ ಕೆಲವರು ಹಗಲು ರಾತ್ರಿ ಎನ್ನದೆ ಡ್ಯಾಂ ನೀರನ್ನು ಬಳಸುತ್ತಿದ್ದಾರೆ.

ನೀರಿನಮಟ್ಟ ಕುಸಿತ

ಯರಗೋಳ್​ ಡ್ಯಾಂಅನ್ನು ಕುಡಿಯುವ ನೀರಿಗಾಗಿ ನಿರ್ಮಿಸಿದ್ದು, ಕಾನೂನುಬಾಹಿರವಾಗಿ ನೀರನ್ನು ಇತರ ಕಾರಣಗಳಿಗೆ ಬಳಕೆ ಮಾಡುತ್ತಿರುವುದರಿಂದ ಡ್ಯಾಂನಲ್ಲಿ ನೀರಿನಮಟ್ಟ ಕಡಿಮೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಕೆರೆಕುಂಟೆಗಳಲ್ಲಿ ನೀರಿಲ್ಲ. ಮುಂದೆ ಅಂತರ್ಜಲಮಟ್ಟ ಕುಸಿದು ನೀರಿಗಾಗಿ ಸಮಸ್ಯೆ ಎದುರಾಗಬಹುದು. ಡ್ಯಾಂನಲ್ಲಿ ನೀರಿದ್ದರೆ ಪಟ್ಟಣಗಳ ಜನತೆಯ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಎಚ್ಚೆತ್ತುಕೊಂಡು ಡ್ಯಾಂನಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್​ ಸೆಟ್​ಗಳನ್ನು ತೆರವು ಮಾಡಬೇಕು ಎಂಬ ಒತ್ತಾಯ ಬಲವಾಗಿದೆ.

330 ಎಂಸಿಎಫ್ಟಿ ನೀರು ಸಂಗ್ರಹ

ಯರಗೋಳ್​ ಡ್ಯಾಂನ ಒಟ್ಟು ನೀರು ಶೇಖರಣೆ ಸಾಮರ್ಥ್ಯ 500 ಎಂಸಿಎಫ್ಟಿಯಾಗಿದ್ದು, ಸದ್ಯಕ್ಕೆ ಡ್ಯಾಂನಲ್ಲಿ 330 ಎಂಸಿಎಫ್ಟಿಯಷ್ಟು ನೀರು ಲಭ್ಯವಿದೆ. ಜಿಲ್ಲೆಯ ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ಪಟ್ಟಣಗಳಿಗೆ ಯೋಜನೆಯ ಪ್ರಕಾರ ನಿತ್ಯ 23 ಎಂಎಲ್​ಡಿಯಷ್ಟು ನೀರನ್ನು ಪೂರೈಸಬೇಕು. ಡ್ಯಾಂನಿಂದ ನೀರನ್ನು ಕಳವು ಮಾಡುವುದನ್ನು ತಡೆಗಟ್ಟಿದರೆ ಮಾತ್ರ ಈಗ ಡ್ಯಾಂನಲ್ಲಿ ಲಭ್ಯವಿರುವ ನೀರಿನಿಂದ ಮುಂದೆ ಒಂದು ವರ್ಷದವರೆಗೂ ಮೂರೂ ತಾಲೂಕುಗಳಿಗೆ ಪೂರೈಸಬಹುದಾಗಿದೆ. ಇಲ್ಲದಿದ್ದರೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಗುತ್ತಿಗೆ ಅವಧಿ ಅಂತ್ಯ

ಮೂರು ಪಟ್ಟಣಗಳಿಗೆ ನೀರನ್ನು ಪೂರೈಸುವುದು ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ಆದರೆ, ಈಗ ಗುತ್ತಿಗೆದಾರರ ಅವಧಿ ಕಳೆದ ನವಂಬರ್​ಗೆ ಪೂರ್ಣಗೊಂಡಿದ್ದು, ಮುಂದೆ ಇದರ ನಿರ್ವಹಣೆ ಹೇಗೆ ಎಂಬುದು ಗೊತ್ತಾಗಬೇಕಿದೆ. ದಿನದ 24 ಗಂಟೆಗಳ ಕಾಲ ನೀರನ್ನು ಡ್ಯಾಂನಿಂದ ಪಂಪ್​ ಮಾಡಿ ಶುದ್ಧೀಕರಣ ಮಾಡಬೇಕಿದೆ. ಮುಂದೆ ಸ್ಥಳಿಯ ಸಂಸ್ಥೆಗಳು ನಿರ್ವಹಣೆಯ ವೆಚ್ಚವನ್ನು ಭರಿಸುವುದರ ಜತೆಗೆ ಸರಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಮೂರೂ ಪಟ್ಟಣಗಳಿಗೆ ನೀರನ್ನು ಪೂರೈಸಲು ಸಾಧ್ಯ.

ಯರಗೋಳ್​ ಡ್ಯಾಂನಲ್ಲಿ ಅಕ್ರಮವಾಗಿ ಪಂಪ್​ಸೆಟ್​ಗಳನ್ನು ಅಳವಡಿಸಿ ನೀರನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈಗಾಗಲೇ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದ್ದು, ಕೆಲ ಕಡೆ ಪಂಪ್​ ಸೆಟ್​ಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಹೀಗೆ ನೀರನ್ನು ಅನ್ಯ ಕಾರಣಗಳಿಗೆ ಬಳಕೆ ಮಾಡುವುದರಿಂದ ಮುಂದೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು. ಆದ್ದರಿಂದ ಅಕ್ರಮವಾಗಿ ಅಳವಡಿಸಿರುವ ಪಂಪ್​ ಸೆಟ್​ಗಳನ್ನು ತೆರವು ಮಾಡಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. - ಎಸ್​.ವೆಂಕಟೇಶಪ್ಪ ತಹಸೀಲ್ದಾರ್​ ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net