

ರಾಯಚೂರು: ಸಂಸದ ರಾಜಾ ಅಮರೇಶ್ವರ ನಾಯಕ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಈ ಕುರಿತು ದಾಖಲೆ ಸಮೇತ ಲಿಂಗಸುಗೂರು ತಹಸೀಲ್ದಾರ್‌ಗೆ ದೂರು ಸಲ್ಲಿಸಲಾಗಿದ್ದು, ಜತೆಗೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ವಾಲ್ಮೀಕಿ ಸಮಾಜದ ಮುಖಂಡ ನರಸಿಂಹ ನಾಯಕ ಕರಡಿಗುಡ್ಡ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಅಮರೇಶ್ವರ ನಾಯಕ ಶಾಲಾ ದಾಖಲಾತಿಯ ಜಾತಿ ಕಾಲಂನಲ್ಲಿ ಕ್ಷತ್ರೀಯ ಎಂದಿದೆ. ಆದರೆ ಸುಳ್ಳು ದಾಖಲೆ ನೀಡಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಪಡೆದಿದ್ದಾರೆ ಎಂದರು.
ಚಿತ್ರದುರ್ಗದ ಮದಕರಿ ನಾಯಕ ಪ್ರೌಢಶಾಲೆಯಲ್ಲಿ ಅಮರೇಶ್ವರ ನಾಯಕರ ವರ್ಗಾವಣೆ ಪತ್ರದಲ್ಲಿ ಹಿಂದು ಕ್ಷತ್ರೀಯ ಎಂದು ನಮೂದಿಸಲಾಗಿದೆ. ಮೂಲಕ ಕ್ಷತ್ರೀಯ ಮನೆತನಕ್ಕೆ ಸೇರಿದ್ದರೂ ಎಸ್ಟಿ ಪ್ರಮಾಣ ಪತ್ರ ಪಡೆಯುವ ಮೂಲಕ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಸಂಸದರ ಹಿರಿಯ ಸಹೋದರ ರಾಜಾ ರಾಯಪ್ಪ ನಾಯಕರ ಶಾಲಾ ದಾಖಲಾತಿಯಲ್ಲೂ ರಾಜಾ ಕ್ಷತ್ರೀಯ, ಕಾಲೇಜು ದಾಖಲಾತಿಯಲ್ಲಿ ವಾಲ್ಮೀಕಿ ಕ್ಷತ್ರೀಯ ಎಂದು ನಮೂದಿಸಲಾಗಿದೆ. 2015ರಲ್ಲಿ ರಾಯಪ್ಪ ನಾಯಕ ಜಾತಿ ಬದಲಾವಣೆ ಕುರಿತು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಕಾರಣ ರಾಜಾ ಅಮರೇಶ್ವರ ನಾಯಕ ನೀಡಲಾದ ಎಸ್ಟಿ ಪ್ರಮಾಣ ಪತ್ರ ರದ್ದುಗೊಳಿಸಬೇಕು. ಮೀಸಲಾತಿ ದುರ್ಬಳಕೆ ಮಾಡಿಕೊಂಡು ಚುನಾವಣೆಗೆ ಸ್ಪರ‌್ಸುತ್ತಿರುವ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ನರಸಿಂಹ ನಾಯಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಹನುಮಂತಪ್ಪ, ವೆಂಕಟಸ್ವಾಮಿ, ಹನುಮಂತ ನಾಯಕ, ವೆಂಕಟೇಶ ನಾಯಕ, ತಿಮ್ಮನಗೌಡ ಉಪಸ್ಥಿತರಿದ್ದರು.