

ಸಾಸ್ವೆಹಳ್ಳಿ: ಹೋಬಳಿಯ ಬೀರಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣವನ್ನು ಗ್ರಾಮದ ವ್ಯಕ್ತಿಯೋರ್ವ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಲಾ ಆವರಣದಲ್ಲಿ ನಿರಂತರವಾಗಿ ಬೇಯಿಸಿದ ಅಡಕೆ ಒಣಗಿಸಲು ಹಾಕುತ್ತಿದ್ದಾರೆ. ಈ ಕುರಿತು ಅವರಿಗೆ ಅನೇಕ ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ.
ಶಾಲೆಯ ಕಾಂಪೌಂಡ್ ಪಕ್ಕದಲ್ಲಿಯೇ ಈ ವ್ಯಕ್ತಿಯ ಮನೆಯಿದ್ದು, ಶಾಲಾ ಆವರಣ ಸಹ ಒತ್ತುವರಿ ಮಾಡಿದ್ದಾರೆ.
ಈಗ ಮತ್ತಷ್ಟು ಒತ್ತುವರಿಗೆ ಸಂಚು ರೂಪಿಸಿ ಬೇಯಿಸಿದ ಅಡಕೆಯನ್ನು ಒಣಗಿಸಲು ಶಾಲಾ ಆವರಣಕ್ಕೆ ತಂದು ಹಾಕುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಆಟವಾಡಲು ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರಾದ ಬಿ.ವೈ. ಪರಮೇಶ್ವರಪ್ಪ, ಟಿ.ಬಿ. ಗಣೇಶ್, ಬಿ.ವೈ. ಚಂದ್ರಶೇಖರ್, ಡಿ.ಜಿ. ಸಿದ್ದಪ್ಪ ಮತ್ತಿತರರು ದೂರಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆಯಲು ಗ್ರಾಪಂ ಪಿಡಿಒ ಮಂಜುಳಾ ಅವರಿಗೆ ಅನೇಕ ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.