ಹಣ, ಹೆಂಡ, ಸರ್ಕಾರಿ ಮಶಿನರಿಗಳ ದುರುಪಯೋಗ

Pralhad Joshi 3
Published on

ಹುಬ್ಬಳ್ಳಿ : ಉಪ ಚುನಾವಣೆಯಲ್ಲಿ ಜನ ಆಡಳಿತಾರೂಢ ಪಕ್ಷಕ್ಕೆ ಜೈಕಾರ ಹಾಕುವುದು ಸಹಜ. ಹಣ, ಹೆಂಡ ಮತ್ತು ಸರ್ಕಾರಿ ಮಶಿನರಿಗಳ ಅವ್ಯಾಹತ ಬಳಕೆ ಈ ಫಲಿತಾಂಶಕ್ಕೆ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ಲೇಷಿಸಿದ್ದಾರೆ.

ರಾಜ್ಯ ವಿಧಾನಸಭೆಯ ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳು ಕಾಂಗ್ರೆಸ್ ಪಾಲಾದ ಬಗ್ಗೆ ಅವರು ಶನಿವಾರ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದರು.

ಕ್ಷೇತ್ರದ ಅಭಿವೃದ್ಧಿ, ಹೆಚ್ಚಿನ ಅನುದಾನ ನಿರೀಕ್ಷಿಸಿ ಆಡಳಿತಾರೂಢ ಪಕ್ಷಕ್ಕೆ ಮತದಾರರು ಜೈಕಾರ ಹಾಕುತ್ತಾರೆ. ಆದರೆ, ಈ ಚುನಾವಣೆಯಲ್ಲಿ ಆಡಳಿತಾರೂಢ ಸರ್ಕಾರದ ಹಣ, ಹೆಂಡ ಕೆಲಸ ಮಾಡಿದೆ. ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬಿಬ್ಬರು ಸಚಿವರು, 10-15 ಶಾಸಕರು ಬೀಡು ಬಿಟ್ಟು, ಹಣದ ಬಲದಿಂದ ಚುನಾವಣೆ ಎದುರಿಸಿದ್ದಾರೆ. ಜತೆಗೆ ಸರ್ಕಾರದ ಮಶಿನರಿಗಳ ದುರ್ಬಳಕೆ ಆಗಿರುವುದೂ ಮೇಲೊ್ನೕಟಕ್ಕೆ ಕಾಣುತ್ತಿದೆ. ಬಿಜೆಪಿಯೂ ಹಿಂದೆ ಅನೇಕ ಬಾರಿ ಉಪ ಚುನಾವಣೆಗಳಲ್ಲಿ ಗೆದ್ದಿದೆ. ಈ ಉಪ ಚುನಾವಣೆ ಸೋಲಿನ ಬಗ್ಗೆ ಪಕ್ಷದ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ ಎಂದರು.

ಒಂದೆರೆಡು ರಾಜ್ಯಗಳನ್ನು ಬಿಟ್ಟರೆ ದೇಶಾದ್ಯಂತ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಸಂಪೂರ್ಣ ನೆಲಕಚ್ಚಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 21 ಸ್ಥಾನ ಪಡೆದಿದೆ. ವಿರೋಧ ಪಕ್ಷದ ನಾಯಕ ಆಗಲೂ ಲಾಯಕ್ಕಿಲ್ಲದಂಥ ಸ್ಥಿತಿಗೆ ಕಾಂಗ್ರೆಸ್​ನವರು ತಲುಪಿದ್ದಾರೆ. ಕಾಂಗ್ರೆಸ್ ಅನ್ನು ನೆಚ್ಚಿಕೊಂಡು ಹೋದರೆ ಪ್ರಾದೇಶಿಕ ಪಕ್ಷಗಳು ಮುಳುಗಿ ಹೋಗಲಿವೆ. ಮಹಾರಾಷ್ಟ್ರ ಚುನಾವಣೆ ಫಲಿತಾಂಶವೇ ಇದಕ್ಕೆ ನಿದರ್ಶನ ಎಂದು ಟೀಕಿಸಿದರು.

ಜಾರ್ಖಂಡ್​ನಲ್ಲಿ ಜೆಎಂಎಂ ಕೈ ಹಿಡಿದಿದ್ದರಿಂದ ಕಾಂಗ್ರೆಸ್​ಗೆ 10 ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಅಷ್ಟೇ, ಆದರೆ ಬಿಜೆಪಿ, ಜೆಎಂಎಂ ಮಧ್ಯೆ ಸಮಬಲ ಹೋರಾಟ ನಡೆದಿದೆ. ಕಾಂಗ್ರೆಸ್ ಪಕ್ಷ ಪರಜೀವಿ ಪಾರ್ಟಿ. ಅತೃಪ್ತರ ದೇಹದೊಳಕ್ಕೆ ಹೊಕ್ಕು ಇರುವಂತಹ ಅದೃಶ್ಯದ ಪಕ್ಷ ಎಂದು ಜೋಶಿ ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net