

ಚಿಕ್ಕಮಗಳೂರು: ಜಿಲ್ಲೆಯ ಮುತ್ತೋಡಿ ಅರಣ್ಯ ವಲಯದಲ್ಲಿ ಆನೆ ಬೆದರಿಸುವ ತಂಡದ ಹೆಸರಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರ್ಬಳಕೆ ಮಾಡಲಾಗುತ್ತಿದೆ ಎಂದು ತಾಲೂಕು ಡಿಎಸ್‍ಎಸ್ ಸಂಚಾಲಕ ವೆಂಕಟೇಶ್ ಆಗ್ರಹಿಸಿದರು. ಭದ್ರಾ ಅಭಯಾರಣ್ಯದ ಮುತ್ತೋಡಿ ಅರಣ್ಯ ವಲಯದಲ್ಲಿ ಆನೆ ಬೆದರಿಸುವ ತಂಡದ ಹೆಸರಿನಲ್ಲಿ ಅಪಾರ ಪ್ರಮಾಣದ ಹಣ ನಷ್ಟ ಮಾಡಲಾಗಿದೆ. ತಂಡದ ಯಾರೊಬ್ಬರೂ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ. ಜಿಲ್ಲಾಡಳಿತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೆಲಸ ಮಾಡದವರಿಗೆ ತಲಾ 11 ಸಾವಿರ ರೂ.:
ಆನೆ ಬೆದರಿಸುವ ತಂಡಗಳ ಪ್ರತಿ ಸದಸ್ಯರಿಗೆ ಸರ್ಕಾರದಿಂದ ತಲಾ 11 ಸಾವಿರ ರೂ. ನೀಡಲಾಗುತ್ತಿದೆ. ಒಂದು ತಂಡದಲ್ಲಿ 6 ಜನರು ಇದ್ದಾರೆ. ಆದರೆ ಯಾರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದಾಗ ಅದರಲ್ಲಿ ವಯೋವೃದ್ಧರು, ಅಂಗವಿಕಲರ ಹೆಸರುಗಳಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಯುವಜನತೆಗೆ ಉದ್ಯೋಗ ಒದಗಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಯ ಕೈವಾಡ:
ಭ್ರಷ್ಟಾಚಾರದ ಸಂಚಿನ ಹಿಂದೆ ವಲಯ ಅರಣ್ಯ ಅಧಿಕಾರಿಯೊಬ್ಬರ ಕೈವಾಡವಿದೆ. ಅವರನ್ನು ಕೂಡಲೇ ವರ್ಗಾಯಿಸಬೇಕು. ಈ ಭಾಗದಲ್ಲಿ ಅಕ್ರಮವಾಗಿ ಮರ ಹಾಗೂ ಮಣ್ಣನ್ನು ಕದ್ದು ಸಾಗಿಸಲಾಗುತ್ತಿದೆ. ಸರ್ಕಾರದ ವಸತಿ ನಿಲಯಗಳ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು. ಡಿಎಸ್‍ಎಸ್ ತಾಲೂಕು ಸಂಘಟನಾ ಕಾರ್ಯದರ್ಶಿ ಶೇಖರ್, ಸಂಚಾಲಕ ವೀರೇಶ್, ಕಾರ್ಯಕರ್ತ ಯೋಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.