ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ

New Salim Ahmad New
Published on

ಹುಬ್ಬಳ್ಳಿ : ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷದ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಂಚೇತಕ ಸಲೀಂ ಅಹ್ಮದ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿ ಮುಖಂಡರು ಹೊಂಚು ಹಾಕಿದ್ದರು. ಆದರೆ, ಸುಪ್ರಿಂ ಕೋರ್ಟ್ ಇಡಿ ವಿರುದ್ಧ ತರಾಟೆ ತೆಗೆದುಕೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ ಎಂದರು.

ಪಹಲ್ಗಾಮ್ ಘಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ರ್ಚಚಿಸಲು ರಾಜ್ಯಸಭೆಯಲ್ಲಿ ಅವಕಾಶ ನೀಡಿದ್ದರಿಂದ ಉಪರಾಷ್ಟ್ರಪತಿಯಾಗಿದ್ದ ಜಗದೀಪ ಧನಕರ್ ಅವರಿಂದ ಬಿಜೆಪಿ ರಾಜೀನಾಮೆ ಪಡೆದಿರಬಹುದು ಎಂದು ಆರೋಪಿಸಿದರು.

ಪಹಲ್ಗಾಮ್ ದಾಳಿ, ನ್ಯಾಯಮೂರ್ತಿ ವಮಾ ಅವರ ಮನೆಯಲ್ಲಿ ಹಣ ಸಿಕ್ಕಿದ್ದು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದುರ್ಬಳಕೆ ಕುರಿತು ರಾಜ್ಯಸಭೆಯಲ್ಲಿ ರ್ಚಚಿಸಲು ಕಾಂಗ್ರೆಸ್ ಅವಕಾಶ ಕೇಳಿತ್ತು. ಇದಕ್ಕೆ ಸ್ಪಂದಿಸಿದ ಜಗದೀಪ ಧನಕರ್ ಅವರು ಅನುಮತಿ ನೀಡಿದ್ದರು ಎಂದರು.

ಅಧಿಕಾರದಲ್ಲಿ ಯಾವುದೇ ರಾಜಕೀಯ ಪಕ್ಷ ಇದ್ದರೂ ದುರುಪಯೋಗ ಪಡೆಯಬಾರದು. ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹಕಾರ ನೀಡುತ್ತಿಲ್ಲ. ಕೇಂದ್ರದಿಂದ ಬರಬೇಕಾದ ಅನುದಾನ ಬರುತ್ತಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಬಗ್ಗೆ ಮುಖ್ಯಮಂತ್ರಿ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಜಿಎಸ್ ಟಿ ಕೇಂದ್ರದ ವ್ಯಾಪ್ತಿಗೆ ಬರಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ಆರ್​ಎಸ್​ಎಸ್​ಗೆ ನರೇಂದ್ರ ಮೋದಿ ಅವರು ಬೇಡವಾಗಿದ್ದಾರೆ. ಅದಕ್ಕಾಗಿಯೇ 75 ವಯಸ್ಸಿನ ನಂತರ ರಾಜಕೀಯ ನಿವೃತ್ತಿ ಎಂದು ಹೇಳಲಾಗುತ್ತಿದ್ದು, ಮೋದಿಯವರು ಅಧಿಕಾರದಿಂದ ಇಳಿಯುವ ದಿನ ದೂರವಿಲ್ಲ ಎಂದೆನಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net