ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ

jyp cong
ಜಯಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಖಂಡರಾದ ಡಿ.ಬಿ.ರಾಜೇಂದ್ರ, ಕೀರ್ತಿರಾಜ್, ಡಿ.ಎಸ್. ಸತೀಶ್, ಎಚ್.ಎಂ.ಸತೀಶ್, ಚಿಂತನ್ ಇತರರಿದ್ದರು.
Published on

ಜಯಪುರ: ಕೇಂದ್ರ ಸರ್ಕಾರ ಇಡಿ, ಐಟಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷಗಳ ನಾಯಕರನ್ನು ಜೈಲಿಗೆ ಕಳಿಸುವ, ಸುಳ್ಳು ಕೇಸ್ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಿಎಂ ಸಿದ್ದಾರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದೆ. ಯಾವುದೇ ತಪ್ಪು ಮಾಡದಿರುವ ಸಿದ್ದರಾಮಯ್ಯ ಅವರಿಗೆ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮೀನಾರಾಯಣ ಹೇಳಿದರು.

ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇದೇ ರೀತಿ ವಿಪಕ್ಷದಲ್ಲಿದ್ದ ಅಜಿತ್ ಪವಾರ್, ಸುವೆಂದು ಅಧಿಕಾರಿ, ಜ್ಯೋತಿರಾಧಿತ್ಯ ಸಿಂಧ್ಯಾ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ, ನಂತರ ಬಿಜೆಪಿಗೆ ಸೇರಿಸಿಕೊಂಡು ಈಗ ಕ್ಲೀನ್ ಚಿಟ್ ನೀಡಿದೆ. ಬಿಜೆಪಿ ಸೇರಲೊಪ್ಪದ ಅರವಿಂದ ಕೇಜ್ರಿವಾಲ್ ಅವರನ್ನು ವಿನಾಕಾರಣ ಜೈಲಿನಲ್ಲಿಟ್ಟಿತು. ಮುಡಾ ಪ್ರಕರಣದಲ್ಲೂ ಕೇಂದ್ರದ ಕುತಂತ್ರ ಅಡಗಿದೆ. ಬೆದರಿಕೆ ಮೂಲಕ ಸಿದ್ದರಾಮಯ್ಯ ಅವರನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ಭ್ರಷ್ಟ್ಟಾಚಾರದ ಕಪ್ಪುಚುಕ್ಕೆ ಇರದ ಸಿದ್ದರಾಮಯ್ಯ ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಗಲಿದೆ ಎಂದರು.
ಮುಖಂಡ ಎಚ್.ಎಂಸತೀಶ್ ಮಾತನಾಡಿ, ಲೋಕಾಯುಕ್ತ ತನಿಖೆ ಎದುರಿಸುತ್ತಿರುವ 12 ಸಾವಿರ ಕೋಟಿ ರೂಪಾಯಿ ಸಂಪತ್ತಿನ ಒಡೆಯ, ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಪ್ರಕರಣದ ತನಿಖೆ ನಡೆಯುತ್ತಿಲ್ಲ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಸಮಸ್ಯೆಗೆ ಹಗರಣದ ಲೇಬಲ್ ಅಂಟಿಸಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ಬಾಳೆಮನೆ ನಟರಾಜ್ ಮಾತನಾಡಿ, ಬಡವರಿಗೆ ಅನ್ನಭಾಗ್ಯ, ಗ್ಯಾರಂಟಿಗಳ ಮೂಲಕ ನೆರವಾದ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಸುಳ್ಳು ಕೇಸ್‌ನಲ್ಲಿ ಸಿಕ್ಕಿಸುವ ಪ್ರಯತ್ನ ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಮಾಡುತ್ತಿರುವುದು ನಾಚಿಕಗೇಡಿನ ಸಂಗತಿ. ಇದಕ್ಕೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನತೆ ಪಾಠಕಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಡಿ.ಬಿ.ರಾಜೇಂದ್ರ, ಕೀರ್ತಿರಾಜ್, ಡಿ.ಎಸ್.ಸತೀಶ್, ಮಹೇಶ್, ಪಣಿರಾಜ್, ರಕ್ಷಿತ್ ಹೇರೂರು, ಗೋಪಾಲಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net