

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಸಮಾಜವಾದಿ, ಚಾಂಪಿಯನ್ ಲೀಡರ್ ಎಂದು ಹೇಳುತ್ತಾರೆ. ಆದರೆ ಗ್ಯಾರಂಟಿಗಾಗಿ ಕಾರ್ಮಿಕ ನಿಧಿ, ಎಸ್‌ಸಿಪಿ-ಟಿಎಸ್‌ಪಿ ಅನುದಾನ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನೂ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಬುಧವಾರ ಜಿಲ್ಲಾ ಜೆಡಿಎಸ್ ಘಟಕದಿಂದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಲ್ಮೀಕಿ ಹಗರಣದಲ್ಲಿ 85ರಿಂದ 90 ಕೋಟಿ ರೂ. ದುರ್ಬಳಕೆ ಆಗಿದೆ ಎಂಬುದನ್ನು ಸ್ವತಃ ಸಿಎಂ ಅವರೇ ಅಧಿವೇಶನದಲ್ಲಿ ಒಪ್ಪಿದ್ದಾರೆ ಎಂದರು. ನಮ್ಮ ಮುಂದೆ ಒಂದೇ ಸವಾಲು, ಒಂದೇ ಗುರಿ ಇದೆ. ಚುನಾವಣೆ ಸಂದರ್ಭ ಮಾತ್ರ ಪಕ್ಷ ಸಂಘಟನೆ ಮಾಡುವುದಲ್ಲ. ರಾಜ್ಯ ಸರ್ಕಾರ ಐದು ಗ್ಯಾರಂಟಿಗಳು ಸಮರ್ಪಕವಾಗಿ ಈಡೇರಿಸುತ್ತಿಲ್ಲ. ಕಳೆದೆರಡು ವರ್ಷದಿಂದ ಜನರು ಸರ್ಕಾರದ ಆಡಳಿತ ವೈಖರಿ ನೋಡುತ್ತಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಕಾಂಗ್ರೆಸ್ ಗಾಳಿಯೊಂದನ್ನು ಬಿಟ್ಟು ಎಲ್ಲದಕ್ಕೂ ತೆರಿಗೆ ಹಾಕುತ್ತಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೂ ತೆರಿಗೆ ಭಾರ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡುವ ಸಮಯ ಇದಾಗಿದೆ. ಸಾರ್ವತ್ರಿಕ ಚುನಾವಣೆ ಇನ್ನೂ ದೂರವಿದೆ. ಆದರೆ ಡಿಸೆಂಬರ್ ನಂತರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತಿ, ಮಹಾನಗರ ಪಾಲಿಕೆ ಚುನಾವಣೆಗಳು ಬರಲಿವೆ. ಅವು ಕಾರ್ಯಕರ್ತರ ಚುನಾವಣೆಗಳಾಗಿವೆ. ಹಾಗಾಗಿ ಮುಂದೆ ಸಾಕಷ್ಟು ಸವಾಲುಗಳನ್ನು ಎದುರಿಸಲು ಕಾರ್ಯಕರ್ತರು ಸಜ್ಜಾಗಬೇಕಿದೆ ಎಂದು ಕರೆ ನೀಡಿದರು. ಶಾಸಕಿ ಶಾರದಾ ಪೂರ‌್ಯಾನಾಯ್ಕ, ವಿಪ್ರ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ಉಡುಪ, ರಾಜಲಕ್ಷ್ಮೀ, ವಿಜಯಲಕ್ಷ್ಮೀ, ಪರಿಮಳಾ, ಗೀತಾ, ಲಕ್ಷ್ಮೀ, ಅನ್ನಪೂರ್ಣಾ, ಜಯಲಕ್ಷ್ಮೀ, ಸುವರ್ಣಾ ಮತ್ತಿತರರು ಪಕ್ಷಕ್ಕೆ ಸೇರ್ಪಡೆಗೊಂಡರು. ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಗೌಡ, ನಗರ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಗೀತಾ ಸತೀಶ್, ನರಸಿಂಹ ಗಂಧದಮನೆ, ತ್ಯಾಗರಾಜ್, ರಾಮಕೃಷ್ಣ ಇತರರಿದ್ದರು.
ಜನರೊಂದಿಗೆ ಜನತಾದಳ ಕಾರ್ಯಕ್ರಮ ಅತ್ಯಂತ ಅವಶ್ಯಕ. ಸಿಎಂ ಸಿದ್ದರಾಮಯ್ಯ ನಾನು ದೇವರಾಜ ಅರಸು ಇದ್ದಂತೆ ಎಂದು ಹೇಳುತ್ತ, ಬಡವರ ಉದ್ಧಾರ ಮಾಡುವ ಬದಲು ಕೆಳಮಟ್ಟಕ್ಕೆ ಕಳಿಸುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸಾಮಾಜಿಕ ಕ್ರಾಂತಿ ಬರೀ ಮಾತಾಗಿದೆ. ಯಾವುದೇ ಕಾಮಗಾರಿಗೆ ಯಾರೂ ಟೆಂಡರ್ ಹಾಕಲು ಬರುತ್ತಿಲ್ಲ. ಹಳೆಯ ಬಾಕಿ ಬಿಡುಗಡೆ ಮಾಡುತ್ತಿಲ್ಲ. ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ