

ಶಿಗ್ಗಾಂವಿ: ಸರ್ಕಾರಿ ವಾಹನವನ್ನು ಸ್ವಂತಕ್ಕೆ ಬಳಸುತ್ತಿರುವುದನ್ನು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಿಗ್ಗಾಂವಿ ಹತ್ತಿರದ ಗಂಗೆಬಾವಿ ಕೆಎಸ್‌ಆರ್‌ಪಿ ಬಟಾಲಿಯನ್‌ನ ಅಧಿಕಾರಿ ಸುಲೇಮಾನ್ ಅವರು ತಮ್ಮ ಕುಟುಂಬದ ಸದಸ್ಯರನ್ನು ಹಾವೇರಿ ರೈಲು ನಿಲ್ದಾಣದಿಂದ ಮನೆಗೆ ಕರೆತರಲು ಬಟಾಲಿಯನ್‌ನ ಪೊಲೀಸ್ ಜೀಪ್(ಕೆಎ 27-ಜಿ 0539) ಕಳುಹಿಸಿದ್ದರು.
ಇದನ್ನು ಗಮನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾನಗೇರಿ ಜೀಪು ತಡೆದು ಪ್ರಶ್ನಿಸಿದರು. ಅದೇ ವೇಳೆಗೆ ಚಾಲಕ ವೆಂಕಟೇಶಗೆ ಪೊಲೀಸ್ ಅಧಿಕಾರಿ ಸುಲೇಮಾನ್ ಕರೆ ಮಾಡಿದ್ದರು. ಅವರೊಂದಿಗೆ ಮಾತನಾಡಿದ ರಘು, ಅಧಿಕಾರ ದುರುಪಯೋಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ತನಗೆ ಹುಷಾರಿಲ್ಲದ್ದರಿಂದ ಕುಟುಂಬದವರನ್ನು ಕರೆ ತರಲು ತಾನೇ ಜೀಪು ಕಳುಹಿಸಿದ್ದೆ. ತಪ್ಪಾಗಿದೆ, ಕ್ಷಮಿಸಿ ಎಂದು ಅಧಿಕಾರಿ ಹೇಳಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಘು, ತಪ್ಪಿತಸ್ಥ ಅಧಿಕಾರಿ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.