

ಬಾಗಲಕೋಟೆ: ರಾಜ್ಯದ ಪರಿಶಿಷ್ಟ ಜಾತಿ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ 11,442 ಕೋಟಿ ಹಣವನ್ನು ದಲಿತರ ಅಭಿವೃದ್ಧಿಗೆ ಬಳಸದೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಂಡು ಎಸ್‌ಸಿ, ಎಸ್‌ಟಿ ಸಮುದಾಯವನ್ನು ಕಾಂಗ್ರೆಸ್ ವಂಚಿಸುತ್ತಿದೆ ಎಂದು ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡಾಗೊಮ್ಮೆ ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ ನಾಟಕೀಯ ಮಾತುಗಳಿಂದಲೇ ನಂಬಿಸಿ ಆರ್ಥಿಕ ಸಬಲೀಕರಣದಲ್ಲಿ ಒಳಹೊಡೆತ ನೀಡುತ್ತಲೇ ಬಂದಿದ್ದು, ಇದಕ್ಕೆ ಹತ್ತು ಹಲವು ಜ್ವಲಂತ ಸಾಕ್ಷಿಗಳಿವೆ. ಮುಖ್ಯಮಂತ್ರಿಗಳಿಗೆ ದಲಿತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೇ ಎಸ್‌ಸಿಪಿ, ಟಿಎಸ್‌ಪಿ. ಹಣವನ್ನು ಕೂಡಲೇ ಮರಳಿಸಿ ಪರಿಶಿಷ್ಟರ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಿ ಅದು ಬಿಟ್ಟು ರಾಜ್ಯದ ದಲಿತರನ್ನು ವಂಚಿಸುತ್ತಿರುವದು ಅತ್ಯಂತ ಹೇಯ ಕೃತ್ಯವಾಗಿದೆ ಎಂದರು.
ಒಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಗೃಹ ಸಚಿವ ಡಾ.ಜಿ.ಪರಮೇಶ್ವರರವರು ಒಂದು ರೀತಿಯ ಹೇಳಿಕೆ ನೀಡುತ್ತಾರೆ ಇನ್ನೊಂದೆಡೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪರವರು ಮತ್ತು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಒಂದೊಂದು ಬಗೆಯ ಹೇಳಿಕೆಗಳನ್ನು ನೀಡಿ ರಾಜ್ಯದ ಪರಿಶಿಷ್ಟರನ್ನು ಗೊಂದಲದಲ್ಲಿ ಸಿಲುಕಿಸುತ್ತಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲವೇ ಇಲ್ಲ. ಒಳ ಮೀಸಲಾತಿಯನ್ನು ಈಗಾಗಲೇ ಹಿಂದಿನ ಸರ್ಕಾರವು ಕೇಂದ್ರಕ್ಕೆ ಶಿಾರಸ್ಸು ಮಾಡಿಯಾಗಿದೆ. ಆ ವಿಚಾರದಲ್ಲಿ ಪ್ರಸ್ತುತ ಸರ್ಕಾರ ಅನಾವಶ್ಯಕ ಮೂಗು ತೂರಿಸುತ್ತಾ ರಾಜ್ಯದ ಪರಿಶಿಷ್ಟರಿಗೆ ಮಂಕು ಬೂದಿಯನ್ನು ಎರಚುವದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಮಾದಿಗ ಮಹಾಸಭಾ ರಾಜ್ಯ ಸಂಘಟನಾ ಸಂಚಾಲಕ ಶಿವಾನಂದ ಟವಳಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಾವಾಡಿಗರ ಹಟ್ಟಿಯಲ್ಲಿ ನಡೆದ ವಿಷಪೂರಿತ ನೀರು ಕುಡಿದು ಸುಮಾರು ಎಂಟು ಜನ ಮಾದಿಗರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಸರ್ಕಾರವು ಸಾಮಾಜಿಕ ನ್ಯಾಯದ ಪರ ನಡೆಯದೇ ಇಡೀ ಘಟನೆಯನ್ನು ತಿರುಚಿ ಕಲುಷಿತ ನೀರು ಕಾಲರಾ ಹೆಸರಲ್ಲಿ ಸಾಮೂಹಿಕ ಹತ್ಯೆಗೆ ಬೆಂಗಾವಲಾಗಿ ನಿಂತಿದೆ.
ಸಚಿವರು ಸರ್ಕಾರದ ಗಮನ ಸೆಳೆಯುವಲ್ಲಿ ವಿಲರಾಗಿದ್ದು ಜಾತಿಯತೆ ನಡೆ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಾದಿಗರನ್ನು ಹತ್ತಿಕ್ಕುವ ಹುನ್ನಾರವು ನಡೆಯುತ್ತಿದೆ. ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಹತ್ತಿರವಿರದ ಸ್ಥಾನ ನೀಡಿ ಮಾದಿಗರನ್ನು ರಾಜಕೀಯವಾಗಿ ಹತ್ತಿಕ್ಕಿದ್ದು ಜ್ವಲಂತ ಉದಾಹರಣೆಯಾಗಿದೆ ಎಂದರು.
ಮಾದಿಗ ಮಹಾಸಭಾ ರಾಜ್ಯ ಕಾರ್ಯದರ್ಶಿ ಸತೀಶ ಎಚ್.ಸೂಳಿಕೇರಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಕಾಂತಿಚಂದ್ರ ಜ್ಯೋತಿ, ಯುವ ಘಟಕದ ಜಿಲ್ಲಾಧ್ಯಕ್ಷ ಸುನೀಲ ಕಂಬೋಗಿ, ಬಾಗಲಕೋಟೆ ತಾಲೂಕ ಕಾರ್ಯದರ್ಶಿ ಕನಕಪ್ಪ ಎಸ್.ಪೂಜಾರಿ, ಶಿವರಾಜ ಎಂ.ಬೆಣ್ಣೂರ ಇದ್ದರು.