ಪುರಸಭೆ ವಾಹನಗಳ ಡೀಸೆಲ್ ಹಣ ದುರ್ಬಳಕೆ: ಸವಣೂರ ಪುರಸಭೆಯಲ್ಲಿ ಸದಸ್ಯರ ಆಕ್ರೋಶ

Purasabhe meeting
Published on

ಸವಣೂರ: ಪುರಸಭೆ ವಾಹನಗಳಿಗೆ ತುಂಬಿಸುವ ಡಿಸೇಲ್​ನಲ್ಲಿ ಹಣ ದುರ್ಬಳಕೆಯಾಗಿದೆ. ಕಚೇರಿ ಚಾಲಕ ಬಿಟ್ಟು ಮತ್ತೊಬ್ಬರು ವಾಹನ ಚಲಾಯಿಸುತ್ತಿದ್ದಾರೆ. ಏನಾದರೂ ಅನಾಹುತ ಆದಲ್ಲಿ ಯಾರು ಹೊಣೆ? ಪುರಸಭೆಯಲ್ಲಿ ನಿರಂತರವಾಗಿ ಇಂತಹ ಘಟನೆ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತಿಲ್ಲ ಎಂದು ಅಬ್ದುಲ್​ಖಾದರ್ ಪರಾಶ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಡಿಸೇಲ್ ಹಣ ಪಾವತಿಗೆ ಸಂಬಂಧಿಸದವರು ಸಹಿ ಹಾಕಿ ಕೊಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕುವವರಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಉತ್ತರಿಸಿ, ಇವು ನಾನು ಅಧಿಕಾರ ಸ್ವೀಕರಿಸುವ ಮೊದಲು ನಡೆದ ಘಟನೆಗಳು, ಈಗ ಇಂತಹ ಘಟನೆಗಳಿಗೆ ಅವಕಾಶ ನೀಡುತ್ತಿಲ್ಲ. ಆದರೂ ಸೂಕ್ತ ತನಿಖೆ ಕೈಗೊಂಡು ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಪುರಸಭೆ ವ್ಯಾಪ್ತಿಯಲ್ಲಿರುವ ಆಸ್ತಿಗಳ ಹಕ್ಕು ವರ್ಗಾವಣೆಯ ಶುಲ್ಕ ಹಾಗೂ ಉದ್ದಿಮೆ ಪರವಾನಗಿ ಶುಲ್ಕ ಪರಿಶೀಲಿಸಲು ನಡೆದ ಚರ್ಚೆಯಲ್ಲಿ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದರು.

ಆಸ್ತಿ ಖರೀದಿ ಮೇಲೆ ಶೇ. 1ರಷ್ಟು ಶುಲ್ಕ ವಿಧಿಸಲು ಮುಂದಾದ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಸ್ವಪಕ್ಷಿಯರೇ ವಿರೋಧ ವ್ಯಕ್ತ ಪಡಿಸಿ ಶೇ. 1ರಷ್ಟು ಬೇಡ ಕನಿಷ್ಠ ಶುಲ್ಕ ತೀರ್ವನಿಸಲು ಅನುಮೋದನೆ ನೀಡಲಾಯಿತು.

ಪಟ್ಟಣದ ಹೊರ ವಲಯದಲ್ಲಿರುವ ಸುಮಾರು 15 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ವಸಾಹತು ಸರ್ವೆ ನಂ. 81, 84 ಹಾಗೂ 85/2ರನ್ನು ತೆರಿಗೆ ವ್ಯಾಪ್ತಿಗೆ ಒಳ ಪಡಿಸುವ ಚರ್ಚೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೊಳ್ಳುವ ಟೆಂಡರ್​ಗಳಿಗೆ ಅನುಮೋದನೆ ನೀಡಲಾಯಿತು.

ಅಂಬೇಡ್ಕರ್ ವೃತ್ತ ನವೀಕರಣಗೊಳಿಸಿ

ಪಟ್ಟಣದ ಹೃದಯ ಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತವನ್ನು ನವೀಕರಣಗೊಳಿಸಲು ಪ್ರಸ್ತಾಪಿಸುತ್ತಿದ್ದಂತೆ ಸದಸ್ಯ ಲಕ್ಷ್ಮಣ ಕನವಳ್ಳಿ, ಆಕ್ರೋಶ ವ್ಯಕ್ತಪಡಿಸಿ, ಕೇವಲ ಸಭೆಯಲ್ಲಿ ರ್ಚಚಿಸಿ ಕೈಬಿಡಬೇಡಿ. ಅಂಬೇಡ್ಕರ್ ಜಯಂತಿ ಸಂದರ್ಭಕ್ಕೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸುವಂತೆ ಒತ್ತಾಯಿಸಿದರು.

ನೂತನ ಸ್ಥಾಯಿ ಸಮಿತಿ ರಚಿಸಲಾಯಿತು. ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ, ಉಪಾಧ್ಯಕ್ಷೆ ಮೈನುನ್ನಿಸಾ ಪಟೇಲ್, ಮುಖ್ಯ ಇಂಜನಿಯರ್ ನಾಗರಾಜ ಮಿರ್ಜಿ, ವ್ಯವಸ್ಥಾಪಕ ಮಹೇಶ ದೊಡ್ಡಣ್ಣನವರ, ಸರ್ವ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net