

ಬೆಂಗಳೂರು: ರಾಜ್ಯದಲ್ಲಿ ಅಮೃತ್‌ಯೋಜನೆ ಅನುಷ್ಠಾನದ ಹೆಸರಿನಲ್ಲಿ ಬೃಹತ್ ಮೊತ್ತ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದ ಆರೋಪ ಸಂಬಂಧ ವಾರದೊಳಗೆ ಸ್ಪಷ್ಟವಾದ ಮಾಹಿತಿಯನ್ನು ಒಳಗೊಂಡ ವರದಿಯನ್ನು ಸಲ್ಲಿಸುವಂತೆ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದೆ.
ಈ ಸಂಬಂಧ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯವು ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ದೂರಿಗೆ ಸಂಬಂಧಿಸಿ ವಿವರವಾದ ಮಾಹಿತಿ ಒಳಗೊಂಡ ವರದಿಯನ್ನು ರವಾನಿಸಬೇಕು ಎಂದು ಸ್ಪಷ್ಟ ಸೂಚನೆ ಕೊಡಲಾಗಿದೆ.
ಕೇಂದ್ರ ಸರ್ಕಾರವು ಅಮೃತ್ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 2023-25ನೇ ಸಾಲಿಗೆ ಬಿಡುಗಡೆ ಮಾಡಿದ್ದ 16,989.66 ಕೋಟಿ ರೂ. ಅನುದಾನದಲ್ಲಿ ಹೆಚ್ಚಿನ ಮೊತ್ತವು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದಾಗಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಇತ್ತೀಚಿಗೆ ಪ್ರಧಾನಮಂತ್ರಿ ಹಾಗೂ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಸಚಿವರಿಗೆ 7,281 ಪುಟಗಳ ದಾಖಲೆ ಸಹಿತ ದೂರು ಸಲ್ಲಿಸಿದ್ದರು.
ಈ ದೂರು ಆಧರಿಸಿ ಕೇಂದ್ರವು ಅನುದಾನ ದುರ್ಬಳಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಸಂಬಂಧಿಸಿದ ಇಲಾಖೆಯಿಂದ ಸ್ಪಷ್ಟನೆ ರೂಪದಲ್ಲಿ ದಾಖಲೆ ಸಹಿತಿ ಮಾಹಿತಿ ಒದಗಿಸಲು ಸೂಚನೆ ನೀಡಿದೆ. ಜತೆಗೆ ಪೌರಾಡಳಿತ ನಿರ್ದೇಶನಾಲಯದ ಅಮೃತ್ ಯೋಜನೆಯ ಮಿಷನ್ ನಿರ್ದೇಶಕರಿಗೂ ಪತ್ರವನ್ನು ರವಾನಿಸಲಾಗಿದೆ ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ.