

ಚಿಕ್ಕಬಳ್ಳಾಪುರ: ಅಕ್ರಮವಾಗಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಗಳ ದುರ್ಬಳಕೆ, ರೀ ಫಿಲ್ಲಿಂಗ್ ದಂಧೆಯು ನಡೆಯುತ್ತಿದೆ. ವ್ಯಾಪಕ ಎಚ್ಚರಿಕೆ ನಡುವೆಯೂ ದಂಧೆಕೋರರು ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೆ ಅಧಿಕಾರಿಗಳ ದಾಳಿಯ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದಾರೆ.
ಶಿಡ್ಲಘಟ್ಟ ನಗರದ ವಿವಿದೆಡೆ ದಾಳಿ ನಡೆಸಿದ ತಾಲೂಕು ಕಚೇರಿಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕರ ತಂಡವು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಗೃಹೋಪಯೋಗಿ ಅಡುಗೆ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ. ನಗರದ ನಾನಾ ಕಡೆ ಹೋಟೆಲ್, ಕಾಫಿ ಟೀ ಅಂಗಡಿ ಮೊದಲಾದ ಕಡೆ ದಿಢೀರ್ ದಾಳಿ ನಡೆಸಿದ ಆಹಾರ ನಿರೀಕ್ಷಕರಾದ ಪ್ರಕಾಶ್, ವೆಂಕಟಲಕ್ಷ್ಮಮ್ಮ ಅವರ ತಂಡವು ೧೩ ಗೃಹ ಉಪಯೋಗಿ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದೆ. ಸಿಲಿಂಡರ್ ಗಳನ್ನು ತನಿಖಾ ವರದಿಯೊಂದಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ವಶಕ್ಕೆ ನೀಡಲಿದ್ದು ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ನೊಟೀಸ್ ನೀಡಿ ಮಾಹಿತಿ ಕೇಳಲಿದ್ದಾರೆ. ವಾಣಿಜ್ಯ ಬಳಕೆಗೆಂದು ಸಿಲಿಂಡರ್ ಗಳನ್ನು ಪಡೆದ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಸಿಲಿಂಡರ್ ಗಳನ್ನು ವಾಪಸ್ ಮಾಡಲಿದ್ದಾರೆ. ಇಲ್ಲವಾದಲ್ಲಿ ಸಿಲಿಂಡರ್ ಗಳನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.